ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನ ಫಿರೋಜ್‌ಪುರದ ಮೇಲ್ಸೇತುವೆಯೊಂದರಲ್ಲಿ ಬುಧವಾರ 15-20 ನಿಮಿಷ ಸಿಕ್ಕಿಹಾಕಿಕೊಂಡ ಘಟನೆಗೆ ಹಲವು ಆಯಾಮಗಳು ಮತ್ತು ವಿವರಣೆಗಳು ಇವೆ. ಒಂದು ಅತ್ಯಂತ ಮುಖ್ಯವಾದ ವಿಚಾರ ಇದೆ. ಈ ಘಟನೆಗೆ ಸಂಬಂಧಿಸಿ ನಡೆಯುತ್ತಿರುವ ರಾಜಕೀಯದ ಮಧ್ಯೆ, ಭದ್ರತಾ ಲೋಪ ಎಂಬ ಅತ್ಯಂತ ಮುಖ್ಯ ವಿಚಾರವು ಮರೆಯಾಗಿ ಹೋಗಲು ಅವಕಾಶ ನೀಡಬಾರದು.
ಯವರಿದ್ದ ವಾಹನ ಮತ್ತು ಬೆಂಗಾವಲು ವಾಹನಗಳ ಸಾಲು ಮೇಲ್ಸೇತುವೆಯಲ್ಲಿ ಸ್ಥಗಿತಗೊಳ್ಳುವಂತಾಯಿತು. ಭಟಿಂಡಾಕ್ಕೆ ವಾಯು ಮಾರ್ಗದಲ್ಲಿ ಬಂದಿದ್ದ ಪ್ರಧಾನಿಯವರು ಅಲ್ಲಿಂದ ಫಿರೋಜ್‌ಪುರ ಸಮೀಪದ ಹುಸೈನಿವಾಲಾಕ್ಕೆ ರಸ್ತೆ ಮಾರ್ಗದ ಮೂಲಕ ಹೋಗಿದ್ದರು. ಭದ್ರತಾ ಲೋಪದ ಬಳಿಕ, ಪ್ರಧಾನಿಯವರು ಕಾರ್ಯಕ್ರಮವನ್ನು ರದ್ದುಪಡಿಸಿ ದೆಹಲಿಗೆ ಹಿಂದಿರುಗಿದರು. ಇದೊಂದು ಭದ್ರತಾ ಲೋಪ ಎಂದು ಕೇಂದ್ರ ಗೃಹ ಸಚಿವಾಲಯ ಪರಿಗಣಿಸಿದೆ. ಪ್ರಕರಣದ ಬಗ್ಗೆ ವರದಿ ಕೊಡುವಂತೆ ಪಂಜಾಬ್ ಸರ್ಕಾರಕ್ಕೆ ಸೂಚಿಸಿದೆ. ಲೋಪಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ಬಿಜೆಪಿ ಆರೋಪಿಸಿದೆ. ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಘಟನೆಯ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯವರ ಭದ್ರತೆಗೆ ಯಾವುದೇ ಬೆದರಿಕೆ ಉಂಟಾಗಿಲ್ಲ ಎಂದಿದ್ದಾರೆ. ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.
ಪ್ರಧಾನಿಯವರು ಸಂಚರಿಸುವ ಮಾರ್ಗವನ್ನು ಕೊನೆಯ ಕ್ಷಣದಲ್ಲಿ ಬದಲಾವಣೆ ಮಾಡಿದ್ದರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಪಂಜಾಬ್ ಸರ್ಕಾರ ಹೇಳಿದೆ. ಪ್ರಧಾನಿಯವರು ಭಾಗವಹಿಸಬೇಕಿದ್ದ ಕಾರ್ಯಕ್ರಮದಲ್ಲಿ ಸೇರಿದ್ದ ಜನರ ಸಂಖ್ಯೆಯು ನಿರೀಕ್ಷಿಸಿದ್ದಕ್ಕಿಂತ ಬಹಳ ಕಡಿಮೆ ಇತ್ತು. ಹಾಗಾಗಿ, ಪ್ರಧಾನಿಯವರ ಕಾರ್ಯಕ್ರಮವನ್ನು ರದ್ದು ಮಾಡಲಾಯಿತು ಎಂದು ಕಾಂಗ್ರೆಸ್ ಪಕ್ಷವು ಆರೋಪಿಸಿದೆ. ಪ್ರಧಾನಿಯವರು ಕಾರ್ಯಕ್ರಮದಲ್ಲಿ ಭಾಗವಹಿಸದೆಯೇ ಹಿಂದಿರುಗಿದ್ದು, ಘಟನೆಯ ಕುರಿತು ನಾಟಕೀಯವಾದ ಹಲವು ಬೆಳವಣಿಗೆಗಳಿಗೆ ಕಾರಣವಾಗಿದೆ. ರಾಜಕೀಯ ಪಕ್ಷಗಳ ನಡುವೆ ಕೆಸರೆರಚಾಟ ನಡೆದಿದೆ. ಆದರೆ, ಈ ರಾಜಕೀಯ ಮೇಲಾಟದಲ್ಲಿ ಭದ್ರತಾ ಲೋಪದ ವಿಚಾರವು ಹಿನ್ನೆಲೆಗೆ ಸರಿಯಬಾರದು. ಪ್ರಧಾನಿಯವರ ಸಂಚಾರಕ್ಕೆ ಸಂಬಂಧಿಸಿ ಬಹಳಷ್ಟು ಯೋಜನೆ ಮಾಡಲಾಗುತ್ತದೆ. ಪ್ರಧಾನಿಗೆ ಯಾವುದೇ ಲೋಪ ಇಲ್ಲದೆ ಭದ್ರತೆ ಒದಗಿಸುವುದರಲ್ಲಿ ಹಲವು ಸಂಸ್ಥೆಗಳ ಪಾತ್ರ ಇದೆ. ಭದ್ರತೆಯ ಹಲವು ಪದರಗಳು ಇರುತ್ತವೆ. ಪರ್ಯಾಯ ಯೋಜನೆಗಳು ಇರುತ್ತವೆ. ಅನಿರೀಕ್ಷಿತವಾದ ಯಾವುದೇ ಸಂಗತಿ ನಡೆದರೂ ಅದನ್ನು ಎದುರಿಸಲು ಬೇಕಾದ ಕಾರ್ಯತಂತ್ರ ಇರುತ್ತದೆ. ದಿಢೀರ್ ಪ್ರತಿಭಟನೆ, ರಸ್ತೆ ತಡೆಯಂತಹುದು ನಡೆದರೆ ಏನು ಮಾಡಬೇಕು ಎಂಬುದನ್ನು ಗಣನೆಗೆ ತೆಗೆದುಕೊಳ್ಳಲಾಗಿದೆಯೇ ಎಂಬುದು ತಿಳಿದು ಬಂದಿಲ್ಲ. ಕಾರ್ಯಕ್ರಮವನ್ನೇ ರದ್ದುಪಡಿಸುವುದು ಕೊನೆಯ ಆಯ್ಕೆ. ಏಕೆಂದರೆ, ಕಾರ್ಯಕ್ರಮವನ್ನು ರದ್ದು ಮಾಡಿದರೆ ವೈಫಲ್ಯವನ್ನು ಒಪ್ಪಿಕೊಂಡಂತೆಯೇ ಆಗುತ್ತದೆ. ಪ್ರಧಾನಿಯವರ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಲು ಆಗದೇ ಇದ್ದರೆ ಕಾರ್ಯಕ್ರಮವನ್ನು ರದ್ದುಪಡಿಸುವ ಆಯ್ಕೆ ಮಾತ್ರ ಇರುತ್ತದೆ ಎಂಬುದೂ ನಿಜ.
ಭದ್ರತಾ ಲೋಪ ಘಟನೆಯ ತನಿಖೆಯು ವೃತ್ತಿಪರವಾಗಿ ನಡೆಯಬೇಕು; ಲೋಪಕ್ಕೆ ಕಾರಣರಾದ ಜನರು ಅಥವಾ ಸಂಸ್ಥೆಗಳನ್ನು ಗುರುತಿಸಿ, ಅವರ ಮೇಲೆ ಹೊಣೆ ಹೊರಿಸಬೇಕು. ರಾಜಕೀಯದ ಪ‍್ರಭಾವಕ್ಕೆ ಒಳಗಾಗದೆಯೇ ಇವೆಲ್ಲವೂ ನಡೆಯಬೇಕು. ಪ್ರಧಾನಿಯವರ ಸುರಕ್ಷತೆಯು ರಾಜಕೀಯ ಮಾಡುವ ವಿಚಾರ ಅಲ್ಲ. ಇಬ್ಬರು ಪ್ರಧಾನ ಮಂತ್ರಿಗಳ ಸಾವಿನಂತಹ ಬಹುದೊಡ್ಡ ಬೆಲೆಯನ್ನು ಭದ್ರತಾ ಲೋಪಕ್ಕೆ ದೇಶವು ತೆತ್ತಿದೆ. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಅವರು ಭಾಗವಹಿಸಿದ್ದ ಸಭೆಯೊಂದರಲ್ಲಿ ಕಲ್ಲೆಸೆತ ಉಂಟಾಗಿ, ಭದ್ರತಾ ಲೋಪ ಆಗಿತ್ತು. ಆದರೆ, ಆ ಘಟನೆಯಲ್ಲಿ ಇಂದಿರಾ ಅವರಿಗೆ ಹಾನಿಯೇನೂ ಆಗಿರಲಿಲ್ಲ. ಈಗಿನ ಕಾಲವು ಭಿನ್ನವಾಗಿದೆ ಮತ್ತು ಹೆಚ್ಚು ಕ್ಲಿಷ್ಟಕರವಾಗಿದೆ. ಪ್ರಧಾನಿ ಅಥವಾ ಇನ್ನಾರದೇ ಸುರಕ್ಷತೆಯ ವಿಚಾರದಲ್ಲಿ ಅಸಡ್ಡೆ ಮತ್ತು ನಿರ್ಲಕ್ಷ್ಯ ಸಲ್ಲದು.