ಪತ್ತನಂತಿಟ್ಟ: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿದಾನದಲ್ಲಿ ಮಕರಸಂಕ್ರಮಣ ಪೂಜೆ ಇಂದು(ಜ.14ರಂದು) ಜರಗಲಿದೆ. ಮಕರಜ್ಯೋತಿಯ ಪೂರ್ವಭಾವಿಯಾಗಿ ಪ್ರಾಸಾದ ಶುದ್ಧಿ ಕ್ರಿಯೆ, ಬಿಂಬಶೂದ್ಧಿ ಗುರುವಾರ ಬೆಳಗ್ಗೆ ನಡೆಯಿತು. ತಮಿಳ್ನಾಡಿನಲ್ಲಿ ಒಮಿಕ್ರಾನ್ ನಿಯಂತ್ರಣ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ತಮಿಳ್ನಾಡು ಭಕ್ತಾದಿಗಳ ಸಂಖ್ಯೆಯಲ್ಲಿ ಕಡಿತವುಂಟಾಗಿದೆ. ಕರ್ನಾಟಕ, ಆಂಧ್ರ, ತೆಲಂಗಾಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಸನ್ನಿದಾನ ಬಂದು ಸೇರುತ್ತಿದ್ದಾರೆ.
ಪವಿತ್ರಚಿನ್ನಾಭರಣದ ಶೋಭಾಯಾತ್ರೆ ವಲಿಯಾನವಟ್ಟದಿಂದ ನೀಲಿಮಲೆಗೆ ತಲುಪಿ ಅಪ್ಪಾಚಿಮೇಡು, ಮರಕೂಟ್ಟಂ, ಶರಂಗುತ್ತಿ ಮೂಲಕ ಜ. 14ರಂದು ಸನ್ನಿಧಾನ ತಲುಪಲಿದೆ. ಮಧ್ಯಾಹ್ನ ನಂತರ ಪಂಪೆಯಿಂದ ಸನ್ನಿಧಾನಕ್ಕೆ ಹಾಗೂ ಹದಿನೆಂಟು ಮೆಟ್ಟಿಲೇರಲು ಭಕ್ತಾದಿಗಳಿಗೆ ನಿಯಂತ್ರಣ ಹೇರಲಾಗಿದೆ. ಮಧ್ಯಾಹ್ನ ಪೂಜೆಯ ನಂತರ ಗರ್ಭಗುಡಿ ಬಾಗಿಲು ಮುಚ್ಚಿದರೆ, ಪಂದಳ ಅರಮನೆಯಿಂದ ಪವಿತ್ರ ಆಭರಣ ಸನ್ನಿಧಾನಕ್ಕೆ ತಲುಪಿ, ಶ್ರೀ ಅಯ್ಯಪ್ಪನ ವಿಗ್ರಹಕ್ಕೆ ತೊಡಿಸಿದ ನಂತರ ದೀಪಾರಾಧನೆಯೊಂದಿಗೆ ಮಕರಜ್ಯೋತಿ ದರ್ಶನವಾಗಲಿದೆ.