ಬದಿಯಡ್ಕ: ಆಧ್ಯಾತ್ಮಿಕ ಸಾಧನೆಯೊಂದಿಗೆ ನಾಡು-ನುಡಿಗೆ ತನ್ನದೇ ಕೊಡುಗೆಗಳನ್ನು ನೀಡಿದ ಮಹನೀಯರ ಸ್ಮರಣೆ ನಾಗರಿಕ ಪ್ರಪಂಚದ ಕರ್ತವ್ಯವಾಗಿದೆ. ತಂತ್ರವಿದ್ಯಾತಿಲಕ ಅನಂತಪದ್ಮನಾಭ ಉಪಾಧ್ಯಾಯರು ಸಮಾಜಮುಖಿಯಾಗಿ ಮುನ್ನಡೆಸಿದ ಬಹುಮಾನ್ಯ ದುಡಿಮೆಗಳು ಕಾಸರಗೋಡಿನ ಸಾಹಿತ್ಯ, ಸಾಂಸ್ಕøತಿಕ, ವಿದ್ಯಾಭ್ಯಾಸ ಮತ್ತು ಆಧ್ಯಾತ್ಮ ಕ್ಷೇತ್ರಕ್ಕೆ ಮಹತ್ತರವಾದುದು ಎಂದು ಪ್ರಸಂಗಕರ್ತ ಉದನೇಶ್ವರ ಭಟ್ ಮೂಲಡ್ಕ ಅವರು ತಿಳಿಸಿದರು.
ತಂತ್ರವಿದ್ಯಾತಿಲಕ ದಿ. ಅನಂತಪದ್ಮನಾಭ ಉಪಾಧ್ಯಾಯ ಕೊಲ್ಲಂಗಾನ ಇವರ 18ನೇ ವರ್ಷದ ಸಂಸ್ಮರಣಾ ಸಮಾರಂಭದ ಅಂಗವಾಗಿ ಶ್ರೀಕ್ಷೇತ್ರ ಕೊಲ್ಲಂಗಾನದಲ್ಲಿ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಕೊಲ್ಲಂಗಾನ ಆಯೋಜಿಸಿದ್ದ ಪಂಚವೀರ ಯಕ್ಷಕಥಾ ಆಖ್ಯಾನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿರಿಯ ಸಾಹಿತಿ ಉದಯಶಂಕರ ಎನ್.ಎ. ದೀಪ ಬೆಳಗಿಸಿ ಸಮಾರಂಭ ಉದ್ಘಾಟಿಸಿದರು ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಭಾಗವತ ಮನೋಹರ ಬಲ್ಲಾಳ್ ಅಡ್ವಳ ಉಪಸ್ಥಿತರಿದ್ದು ಮಾತನಾಡಿ ಹಿರಿಯ ತಲೆಮಾರಿನ ಸಾಧಕರ ಬಗೆಗಿನ ನೆನಪಿಸುವಿಕೆ ನಮ್ಮನ್ನು ಕರ್ಮ ಪ್ರಪಂಚದಲ್ಲಿ ಮುನ್ನಡೆಯಲು ಪ್ರೇರೇಪಿಸುತ್ತದೆ ಎಂದರು.
ತಂತ್ರಿವರ್ಯ ಗಣಾಧಿರಾಜ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಂತಪ್ರಜ್ವಲ್ ಕೊಲ್ಲಂಗಾನ ಸ್ವಾಗತಿಸಿದರು. ರವಿಶಂಕರ ಶೆಟ್ಟಿ ಕೊಲ್ಲಂಗಾನ ನಿರೂಪಿಸಿ ವಂದಿಸಿದರು. ಬಳಿಕ ಯಕ್ಷಗಾನ ಮಂಡಳಿ ಹಾಗೂ ಅತಿಥಿ ಕಲಾವಿದರಿಂದ ಮೊದಲ ದಿನದ ಆಖ್ಯಾಯಿಕೆಯಾದ ವೀರ ದುಂದುಭಿ ಪ್ರಸಂಗ ಪ್ರದರ್ಶನ ನಡೆಯಿತು.