ನವದೆಹಲಿ: ಓಮಿಕ್ರಾನ್ ನಂತರ ಈಗ ಕೊರೊನಾದ ಹೊಸ ರೂಪಾಂತರವಾದ ನಿಯೋಕೊವ್ ವಿಶ್ವದ ಆತಂಕವನ್ನು ಹೆಚ್ಚಿಸಿದೆ. ಚೀನಾದ ವುಹಾನ್ ವಿಜ್ಞಾನಿಗಳು ಹೆಚ್ಚಿನ ಸಂಶೋಧನೆ ಮಾಡುತ್ತಿದ್ದು, ದಕ್ಷಿಣ ಆಫ್ರಿಕಾದಲ್ಲಿ ಈ ರೂಪಾಂತರವು ಕಂಡುಬಂದಿದೆ ಎಂದಿದ್ದಾರೆ. ಅದರ ಸೋಂಕು ಮತ್ತು ಸಾವಿನ ಪ್ರಮಾಣ ಎರಡೂ ತುಂಬಾ ಹೆಚ್ಚಾಗಿದ್ದು, ಪ್ರತಿ ಮೂರು ರೋಗಿಗಳಲ್ಲಿ ಒಬ್ಬರನ್ನು ಕೊಲ್ಲುತ್ತದೆ ಎಂದು ಹೇಳಿದೆ.
ಚೀನಾದ ವಿಜ್ಞಾನಿಗಳ ಎಚ್ಚರಿಕೆ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಹೇಳಿಕೆ ಕೂಡ ಹೊರಬಿದ್ದಿದೆ. ನಿಯೋಕೊವ್ ಚೀನಾದ ವುಹಾನ್ ಲ್ಯಾಬ್ ನ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯ ಇದೆ ಎಂದು WHO ಹೇಳಿದೆ. ಡಬ್ಲ್ಯುಎಚ್ಒ ಪ್ರಕಾರ, ಸಾಮಾನ್ಯ ಜನರಿಗೆ ಇದು ಎಷ್ಟು ಅಪಾಯಕಾರಿ? ಎಂಬುದರ ಕುರಿತು ಅಧ್ಯಯನ ಅಗತ್ಯ. ಈ ರೂಪಾಂತರಿ ಬೆಳವಣಿಗೆ ಬಗ್ಗೆ ನಿಗಾ ಇರಿಸಿದ್ದೇವೆ ಎಂದು ಹೇಳಿದೆ.
ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್/ಯುಎನ್ಐ ಪ್ರಕಾರ, ಈ ರೂಪಾಂತರವು ಹೊಸದಲ್ಲ. ಈ ಕೊರೊನಾ ರೂಪಾಂತರವು ಮಾರ್ಸ್ ಕೋವ್ ವೈರಸ್‌ಗೆ ಸಂಬಂಧಿಸಿದೆ. 2012 ಮತ್ತು 2015ರಲ್ಲಿ ಪಶ್ಚಿಮ ಏಷ್ಯಾದ ದೇಶಗಳ ರೋಗಿಗಳಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು ಎಂದು ಹೇಳಿದೆ. ಈ ನಿಯೋಕೋವ್ ರೂಪಾಂತರವು ದಕ್ಷಿಣ ಆಫ್ರಿಕಾದಲ್ಲಿನ ಪ್ರಾಣಿಗಳಲ್ಲಿ ಕಾಣಿಸಿಕೊಂಡಿತು ಬಳಿಕ ಬಾವಲಿಗಳಲ್ಲಿ ಕಂಡುಬಂದಿದೆ ಎಂದು ತಿಳಿಸಿದೆ.
ಮತ್ತೊಂದೆಡೆ, ರಷ್ಯಾದ ವೈರಾಲಜಿ ಮತ್ತು ಜೈವಿಕ ತಂತ್ರಜ್ಞಾನ ವಿಭಾಗವು ಪ್ರಸ್ತುತ ಈ ರೂಪಾಂತರವು ಮನುಷ್ಯರಿಗೆ ಹರಡುವ ಸಾಮರ್ಥ್ಯ ಕಡಿಮೆಯಾಗಿದೆ ಎಂದು ಹೇಳಿದೆ. ಆದರೆ, ಅದರ ಸಾಮರ್ಥ್ಯ ಮತ್ತು ಅಪಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಪರಿಶೀಲಿಸಬೇಕಿದೆ ಎಂದು ತಿಳಿಸಿದೆ.
ಭೀತಿ ಹೆಚ್ಚಿಸಿದ ಬಿಎ-2
ಮತ್ತೊಂದೆಡೆ ಒಮೈಕ್ರಾನ್‌ನ ಸಬ್-ಸ್ಟ್ರೈನ್ (BA.2) ಕೂಡ ಜಗತ್ತನ್ನು ಆತಂಕಕ್ಕೆ ದೂಡಿದೆ. RT-PCR ಪರೀಕ್ಷೆಗಳಲ್ಲಿ ಒಮೈಕ್ರಾನ್‌ನ ಉಪ ವೈರಸ್ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಇದು ಸಹ ವಿಜ್ಞಾನಿಗಳಲ್ಲಿ ಹೆಚ್ಚಿನ ಭೀತಿಯನ್ನುಂಟು ಮಾಡಿದೆ. ಈ ಹೊಸ ಸಬ್-ವೇರಿಯಂಟ್ ಅತ್ಯಂತ ವೇಗವಾಗಿ ಹರಡುತ್ತಿದ್ದು, ಭಾರತ ಸೇರಿದಂತೆ 40 ದೇಶಗಳಲ್ಲಿ ಕಾಣಿಸಿಕೊಂಡಿದೆ.