ಚೆನ್ನೈ: 2017ರಲ್ಲಿ ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಅಪಹರಣ ಮತ್ತು ಚಲಿಸುತ್ತಿರುವ ಕಾರಿನಲ್ಲಿ ಲೈಂಗಿಕ ಹಲ್ಲೆ ಪ್ರಕರಣ ತೀವ್ರ ಸಂಚಲನ ಉಂಟುಮಾಡಿ ಮಾಲಿವುಡ್ ಚಿತ್ರರಂಗದ ಖ್ಯಾತ ನಟ ದಿಲೀಪ್(Actor Dileep) ಮೂರು ತಿಂಗಳು ಜೈಲುವಾಸ ಅನುಭವಿಸಿ ನಂತರ ಜಾಮೀನು ಮೇಲೆ ಹೊರಬಂದರು.
ಇದೀಗ ನಟ ದಿಲೀಪ್ ವಿರುದ್ಧ ಸಾಕ್ಷ್ಯಾಧಾರ ಹಿನ್ನೆಲೆಯಲ್ಲಿ ಪೊಲೀಸರು ಹೊಸ ಎಫ್ಐಆರ್(FIR) ದಾಖಲಿಸಿದ್ದಾರೆ. ನಿರ್ದೇಶಕ ಪಿ ಬಾಲಚಂದ್ರ ಕುಮಾರ್ ಅವರು ರಿಪೋರ್ಟರ್ ಟಿವಿ ಚಾನೆಲ್ ನಲ್ಲಿ ಸಂದರ್ಶನದ ವೇಳೆ ಹೇಳಿದ್ದ ಹೊಸ ವಿಚಾರವನ್ನು ಸಾಕ್ಷಿಯನ್ನಾಗಿ ಇಟ್ಟುಕೊಂಡು ಪೊಲೀಸರು ನಟ ದಿಲೀಪ್ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ನಿರ್ದೇಶಕ ಬಾಲಚಂದ್ರ ಹೇಳಿದ್ದೇನು?: ಪಿಕ್ ಪಾಕೆಟ್ ಸಿನಿಮಾ ನಿರ್ದೇಶನ ವಿಚಾರವಾಗಿ ಮಾತನಾಡಲು ಅಂದು ನಟ ದಿಲೀಪ್ ಮನೆಗೆ ಹೋಗಿದ್ದೆ. ಆಗ ಅಲ್ಲಿ ಲೈಂಗಿಕ ಹಲ್ಲೆ ಕೇಸಿನ ಪ್ರಮುಖ ಆರೋಪಿ ಪಲ್ಸರ್ ಸುನಿ ದಿಲೀಪ್ ಮತ್ತು ಅವರ ಸೋದರ ಅನೂಪ್ ಜೊತೆಗೆ ಇದ್ದರು. 2017ರ ನವೆಂಬರ್ 15ರಂದು ದಿಲೀಪ್, ಅವರ ಕುಟುಂಬ ಸದಸ್ಯರು ಮತ್ತು ಒಬ್ಬ ವಿಐಪಿ ಅತಿಥಿ ಕುಳಿತುಕೊಂಡು ನಟಿಯ ಮೇಲೆ ನಡೆದ ಲೈಂಗಿಕ ಹಲ್ಲೆ ವಿಡಿಯೊವನ್ನು ವೀಕ್ಷಿಸುತ್ತಿದ್ದರು.
ನಿರ್ದೇಶಕ ಬಾಲಚಂದ್ರ ಮಾಡಿರುವ ಈ ಆರೋಪಕ್ಕೆ ಸಂಬಂಧಿಸಿದಂತೆ ಕೊನೆಗೂ ನಟಿ ಮೌನ ಮುರಿದಿದ್ದು ನಿನ್ನೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಹೋರಾಟದ ಹಾದಿಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ಕನ್ನಡ, ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟಿ ಭಾವನಾ ಮೆನನ್ ನಾಲ್ಕೂವರೆ ವರ್ಷಗಳ ನಂತರ ಹಿಂದೆ ನಡೆದ ಆಘಾತಕಾರಿ ವಿಚಾರದ ಬಗ್ಗೆ ಮೌನ ಮುರಿದು, ನನ್ನ ಹೋರಾಟದ ಹಾದಿಯಲ್ಲಿ ನಾನು ಒಬ್ಬಂಟಿಯಲ್ಲ ಎಂದಿದ್ದಾರೆ.
ಐದು ವರ್ಷಗಳ ಹಿಂದೆ ನಡೆದ ಘಟನೆಯನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಮೆಲುಕು ಹಾಕಿದ ಭಾವನಾ, ಐದು ವರ್ಷದ ಹಾದಿ ಬಲಿಪಶುವಿನಿಂದ ಬದುಕುವ ಹುಮ್ಮಸ್ಸಿನೊಂದಿಗಿನ ಹಾದಿ ಸುಲಭವಾಗಿರಲಿಲ್ಲ. ಆ ಸಂದರ್ಭದಲ್ಲಿ ಎಷ್ಟೋ ಮಂದಿ ನನ್ನನ್ನು ಹತ್ತಿಕ್ಕಲು ಪ್ರಯತ್ನಿಸಿದವು, ಅವಮಾನಿಸಿದವು. ಇನ್ನು ಕೆಲವು ಧ್ವನಿಗಳು ನನ್ನ ಪರವಾಗಿ ಮಾತನಾಡಿದವು. ಇದೆಲ್ಲವನ್ನು ನೋಡಿದಾಗ ನನ್ನ ನ್ಯಾಯದ ಹೋರಾಟದ ಹಾದಿಯಲ್ಲಿ ನಾನು ಒಬ್ಬಂಟಿಯಲ್ಲ ಎಂದೆನಿಸುತ್ತಿದೆ. ನ್ಯಾಯ ಗೆಲ್ಲಲು, ಯಾವುದೇ ಮಹಿಳೆಯು ಇಂತಹ ಹೀನಾ ಪರಿಸ್ಥಿತಿಗೆ ಒಳಗಾಗದಂತೆ ನೋಡಿಕೊಳ್ಳಲು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಲು ನನ್ನ ಹೋರಾಟದ ಹಾದಿ ಮುಂದುವರೆಸುತ್ತೇನೆ. ನನ್ನ ಪರವಾಗಿ ನಿಂತ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.
ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾದಲ್ಲಿ ನಾಯಕಿ ನಟಿಯಾಗಿ ಕಾಣಿಸಿಕೊಂಡಿದ್ದ ಭಾವನಾ ಹಳೆಯ ಎಲ್ಲಾ ಕಹಿ ನೆನಪುಗಳಿಂದ ಹೊರಬಮದು ತಮ್ಮ ನಟನೆಗೆ ಮತ್ತಷ್ಟು ಜೀವ ತುಂಬುತ್ತಿದ್ದಾರೆ.
ಮಲಯಾಳಂ ಚಿತ್ರರಂಗದ ದಿಗ್ಗಜರ ಬೆಂಬಲ: ಈ ಪ್ರಕರಣ ಕುರಿತಂತೆ ಇಷ್ಟು ವರ್ಷಗಳ ಕಾಲ ಮೌನವಾಗಿದ್ದ ಮಲಯಾಳಂ ಸೂಪರ್ ಸ್ಟಾರ್ ಗಳಾದ ಮಮ್ಮೂಟಿ ಮತ್ತು ಮೋಹನ್ ಲಾಲ್ ಕೊನೆಗೂ ಮೌನ ಮುರಿದಿದ್ದಾರೆ. ಇದುವರೆಗೆ ಅವರ ನಡೆ ನಟನ ಪರವಾಗಿ ಅಥವಾ ತಟಸ್ಥವಾಗಿ ಇದ್ದಂತಿತ್ತು.
ಆದರೆ ನಿನ್ನೆ ನಟಿ ಮಾಡಿದ್ದ ಇನ್ಸ್ಟಾಗ್ರಾಂ ಪೋಸ್ಟ್ ನ್ನು ಮಮ್ಮೂಟಿಯವರು ರಿಶೇರ್ ಮಾಡಿ, ನಿಮ್ಮ ಜೊತೆ ಎಂದು ಹಾಕಿದ್ದರೆ, ಮೋಹನ್ ಲಾಲ್ ಅವರು ರೆಸ್ಪೆಕ್ಟೆಡ್ ಎಂದು ಬರೆದು ರಿಶೇರ್ ಮಾಡಿದ್ದಾರೆ.
ಇನ್ನು ಬಾಲಿವುಡ್ ಚಿತ್ರ ನಿರ್ದೇಶಕ ಮತ್ತು ಬರಹಗಾರ ಜೋಯಾ ಅಖ್ತರ್ ನಟಿಗೆ ನೈತಿಕ ಬೆಂಬಲ ನೀಡಿದ್ದಾರೆ. ನಿಮಗೆ ಇನ್ನಷ್ಟು ಶಕ್ತಿ ಸಿಗಲಿ ಎಂದು ಜೋಯಾ ಅಖ್ತರ್ ಬೆಂಬಲ ನೀಡಿದ್ದಾರೆ.
ಈ ಮಧ್ಯೆ ನಟ ದಿಲೀಪ್, ಲೈಂಗಿಕ ಹಲ್ಲೆ ಕೇಸಿನ ವಿಚಾರಣೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯ ಹತ್ಯೆ ನಡೆಸಲು ಪಿತೂರಿ ನಡೆಸಿದ್ದರು ಎಂಬ ಹೊಸ ಆರೋಪ ಕೇಸಿನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಕೇರಳ ಹೈಕೋರ್ಟ್ ಮೊರೆ ಹೋಗಿದ್ದಾರೆ.