ಪಾಟ್ನಾ: ಬಿಹಾರದಲ್ಲಿ ತಾಂತ್ರಿಕೇತರ ವರ್ಗಗಳ (ಎನ್‌ಟಿಪಿಸಿ) ರೈಲ್ವೆ ನೇಮಕಾತಿ ಮಂಡಳಿಯ ಎರಡು ಹಂತದ ಪರೀಕ್ಷೆಯ ವಿರುದ್ಧ ಮತ್ತು ಪರೀಕ್ಷೆಯಲ್ಲಿನ ಅಕ್ರಮ ಖಂಡಿಸಿ ಕಳೆದ ಮೂರು ದಿನಗಳಿಂದ ಆಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು, ಬುಧವಾರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಶಾಂತ ರೀತಿಯಲ್ಲಿ ವರ್ತಿಸುವಂತೆ ವಿನಂತಿಸಿಕೊಂಡಿದ್ದಾರೆ.
ಹಿಂಸಾಚಾರದಲ್ಲಿ ಪಾಲ್ಗೊಳ್ಳದಂತೆ ಕೇಂದ್ರ ಸಚಿವರು ಆಕಾಂಕ್ಷಿಗಳಿಗೆ ಮನವಿ ಮಾಡಿದ್ದು, ವಿದ್ಯಾರ್ಥಿಗಳೇ ಕಾನೂನನ್ನು ನಿಮ್ಮ ಕೈಗೆ ತೆಗೆದುಕೊಳ್ಳಬೇಡಿ, ರೈಲ್ವೆ ನಿಮ್ಮ ಆಸ್ತಿ, ದಯವಿಟ್ಟು ಅದನ್ನು ನಾಶಪಡಿಸಬೇಡಿ. ನಿಮ್ಮ ಸಮಸ್ಯೆಗಳನ್ನು ನಾವು ಪರಿಹರಿಸುತ್ತೇವೆ. ಪರೀಕ್ಷೆಗಳ ಫಲಿತಾಂಶ ಪಾರದರ್ಶಕ ಮತ್ತು ನ್ಯಾಯೋಚಿತವಾಗಿರುತ್ತದೆ ಎಂದು ಅಶ್ವಿನಿ ವೈಷ್ಣವ್ ಅವರು ಹೇಳಿದ್ದಾರೆ.
ಬಿಹಾರದ ಗಯಾ ರೈಲು ನಿಲ್ದಾಣದಲ್ಲಿ ಪ್ರತಿಭಟನಾಕಾರರ ಗುಂಪೊಂದು ಕಲ್ಲು ತೂರಾಟ ನಡೆಸಿ, ರೈಲಿಗೆ ಬೆಂಕಿ ಹಚ್ಚಿದ ಬೆನ್ನಲ್ಲೇ ಸಚಿವರ ಈ ಹೇಳಿಕೆ ನೀಡಿದ್ದು, ವಿವಿಧ ರೈಲ್ವೆ ನೇಮಕಾತಿ ಮಂಡಳಿಗಳ ಅಡಿಯಲ್ಲಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ಮತ್ತು ಅನುತ್ತೀರ್ಣರಾದವರ ಕುಂದುಕೊರತೆಗಳನ್ನು ಪರಿಶೀಲಿಸಲು ಸಚಿವಾಲಯ ಸಮಿತಿಯೊಂದನ್ನು ರಚಿಸಿದೆ. ಸಮಿತಿಯು ಮಾರ್ಚ್ 4 ರೊಳಗೆ ರೈಲ್ವೆ ಸಚಿವಾಲಯಕ್ಕೆ ವರದಿ ಸಲ್ಲಿಸಲಿದೆ ಎಂದು ತಿಳಿಸಿದ್ದಾರೆ.
ಪ್ರತಿಭಟನಾಕಾರರು ಆರಂಭದಲ್ಲಿ ರೈಲಿಗೆ ಕಲ್ಲು ತೂರಾಟ ನಡೆಸಿ ನಂತರ ಕೋಚ್‌ಗೆ ಬೆಂಕಿ ಹಚ್ಚಿದರು ಎಂದು ಗಯಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಎಸ್‌ಪಿ) ಆದಿತ್ಯ ಕುಮಾರ್ ಅವರು ಹೇಳಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಹೊತ್ತಿ ಉರಿಯುತ್ತಿದ್ದ ರೈಲಿನ ಬೋಗಿಗಳ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಇನ್ನೊಂದೆಡೆ ಕೆಲ ಅಭ್ಯರ್ಥಿಗಳ ಗಲಾಟೆ ಇನ್ನೂ ಮುಂದುವರಿದಿದೆ. ರೈಲ್ವೇ ಪರೀಕ್ಷೆಯಲ್ಲಿನ ಅವ್ಯವಹಾರದ ಬಗ್ಗೆ ನಮ್ಮ ಆಕ್ರೋಶ ಭುಗಿಲೆದ್ದಿದೆ ಎಂದು ಪ್ರತಿಭಟನಾಕಾರರೊಬ್ಬರು ಹೇಳಿದ್ದಾರೆ.
CBT-2 ಪರೀಕ್ಷೆಯ ದಿನಾಂಕವನ್ನು ಸೂಚಿಸಲಾಗಿಲ್ಲ ಮತ್ತು ಇಲ್ಲಿಯವರೆಗೆ 2019 ರಲ್ಲಿ ರೈಲ್ವೆ ಪರೀಕ್ಷೆಯ ಕುರಿತು ಯಾವುದೇ ನವೀಕರಣವನ್ನು ಸೂಚಿಸಲಾಗಿಲ್ಲ. ಫಲಿತಾಂಶಕ್ಕಾಗಿ ಇನ್ನೂ ಕಾಯಲಾಗುತ್ತಿದೆ. ಸಿಬಿಟಿ 2 ಪರೀಕ್ಷೆ ರದ್ದುಪಡಿಸಿ ಫಲಿತಾಂಶ ಬಿಡುಗಡೆಗೆ ಆಗ್ರಹಿಸುತ್ತೇವೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.