ಜಿನೆವಾ: ವಿಶ್ವ ಆರೋಗ್ಯ ಸಂಸ್ಥೆಯ ಪಶ್ಚಿಮ ಪೆಸಿಫಿಕ್ ಪ್ರಾದೇಶಿಕ ನಿರ್ದೇಶಕ ಟಕೇಶಿ ಕಸಾಯ್ ವಿರುದ್ಧ ಕೇಳಿ ಬಂದಿರುವ ಜನಾಂಗೀಯ ನಿಂದನೆ ಮತ್ತು ಸರ್ವಾಧಿಕಾರಿ ಧೋರಣೆಯ ಆರೋಪದ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಆದರೆ, ಫಿಲಿಪ್ಪೀನ್ಸ್‌ನ ಮನಿಲಾದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾಗಿರುವ ಜಪಾನ್‌ನ ಡಾಕ್ಟರ್ ಟಕೇಶಿ ಕಸಾಯ್ ಈ ಆರೋಪವನ್ನು ನಿರಾಕರಿಸಿದ್ದಾರೆ.
ಟಕೇಶಿ ತನ್ನ ಕೆಳಗಿನ ಸಿಬ್ಬಂದಿಗಳನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದು ಅವರ ರಾಷ್ಟ್ರೀಯತೆಯನ್ನು ಉಲ್ಲೇಖಿಸಿ, ಅದರಲ್ಲೂ ಮುಖ್ಯವಾಗಿ ಫಿಲಿಪ್ಪೀನ್ಸ್‌ನ ಸಿಬಂದಿಗಳನ್ನು, ಅವಹೇಳನ ಮಾಡಿ ನಿಂದಿಸುತ್ತಿದ್ದಾರೆ. ಕಚೇರಿಯ ಸಿಬಂದಿಗಳನ್ನು ವ್ಯವಸ್ಥಿತವಾಗಿ ಬೆದರಿಸುವ ಜತೆಗೆ ಸಾರ್ವಜನಿಕವಾಗಿ ಅಪಹಾಸ್ಯ ಮಾಡುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರೆ ಅವರು ಪ್ರತೀಕಾರ ಕೈಗೊಳ್ಳಬಹುದು ಎಂಬ ಭೀತಿಯಿಂದ ಸಿಬಂದಿಗಳು ಸುಮ್ಮನಿದ್ದಾರೆ ಎಂದು ಆಂತರಿಕ ದೂರು ವಿಭಾಗಕ್ಕೆ ಹಲವು ಅನಾಮಧೇಯ ದೂರು ಸಲ್ಲಿಕೆಯಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ನ್ಯೂಸ್ ಗುರುವಾರ ತನಿಖಾ ವರದಿಯನ್ನು ಪ್ರಕಟಿಸಿತ್ತು. ವಿಶ್ವ ಆರೋಗ್ಯ ಸಂಸ್ಥೆಯ 34 ಸದಸ್ಯರ ಕಾರ್ಯನಿರ್ವಾಹಕ ಮಂಡಳಿಗೆ ಜನವರಿ ಮಧ್ಯದಲ್ಲಿ ಇ-ಮೇಲ್ ಮೂಲಕ ದೂರು ರವಾನಿಸಲಾಗಿದೆ. ಈ ದೂರಿನಲ್ಲಿ ಟಕೇಶಿ ಅವರ ಸರ್ವಾಧಿಕಾರಿ ಧೋರಣೆ ಮತ್ತು ಸಿಬ್ಬಂದಿಗಳನ್ನು ಅವಾಚ್ಯವಾಗಿ ನಿಂದಿಸುವ ಬಗ್ಗೆ ಉಲ್ಲೇಖಿಸಲಾಗಿದೆ.
ಅಲ್ಲದೆ ಕೊರೋನ ಸೋಂಕಿನ ಅಸಮರ್ಪಕ ನಿರ್ವಹಣೆ, ದೇಣಿಗೆದಾರರ ವಂತಿಗೆಯನ್ನು ಅನಗತ್ಯವಾಗಿ ವ್ಯರ್ಥಗೊಳಿಸಿರುವುದು, ಮರು ಆಯ್ಕೆಗೊಳ್ಳಲು ತನ್ನ ಅಧಿಕಾರ ಬಳಸುವುದು, ಸಿಬ್ಬಂದಿ ನೇಮಕಾತಿಯಲ್ಲಿ ಸ್ವಜನ ಪಕ್ಷಪಾತ ಮುಂತಾದ ಉಲ್ಲೇಖವಿದ್ದು ಈ ಆರೋಪದ ಬಗ್ಗೆ ಕಾರ್ಯನಿರ್ವಾಹಕ ಮಂಡಳಿ ಸದಸ್ಯ ದೇಶಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ಕಚೇರಿ, ದೂರನ್ನು ಗಮನಿಸಲಾಗಿದ್ದು ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.