ಪಾಟ್ನ: ಬಿಹಾರದಲ್ಲಿ ರೈಲ್ವೆ ಆಸ್ತಿಗಳಿಗೆ ಅಪಾರ ಪ್ರಮಾಣದ ನಷ್ಟ ಉಂಟು ಮಾಡಿದ ಆರೋಪದ ಮೇಲೆ ಖಾಸಗಿ ಟೀಚರ್ ಹಾಗೂ 16 ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಕಳೆದ 3 ದಿನಗಳಿಂದ ಗುಂಪೊಂದನ್ನು ರೈಲುಗಳಿಗೆ ಬೆಂಕಿ ಹಚ್ಚುವುದಕ್ಕೆ ಹಾಗೂ ಧ್ವಂಸ ಮಾಡುವುದಕ್ಕೆ ಪ್ರಚೋದಿಸಿದ ಆರೋಪವನ್ನು ಎಫ್ಐಆರ್ ನಲ್ಲಿ ಹೊರಿಸಲಾಗಿದೆ.
ಪಾಟ್ನಾದ ಪತ್ರಕಾರ್ ನಗರ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಸೋಮವಾರದಂದು ಸಂಜೆ ನಡೆದ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆಯಲ್ಲಿ ಬಂಧನಕ್ಕೆ ಒಳಗಾಗಿದ್ದ ಕೆಲವು ಪ್ರತಿಭಟನಾ ನಿರತರ ಹೇಳಿಕೆಯ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಪ್ರತಿಭಟನಾ ನಿರತರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಈ ಪೈಕಿ ಖಾನ್ ಸರ್ ಎಂಬಾತನ ಹೆಸರು ಬಹಿರಂಗವಾಗಿದೆ. ಖಾನ್ ಸರ್ ಎಂಬಾತ ತನ್ನ ವಿಶಿಷ್ಟ ಶೈಲಿಯ ಬೋಧನೆಯಿಂದ ಖ್ಯಾತಿ ಪಡೆದಿದ್ದರು. ಈಗ ತನ್ನ ವಿರುದ್ಧ ಪ್ರಕರಣ ದಾಖಲಾಗಿದೆ ಎಂಬುದನ್ನು ತಿಳಿಯುತ್ತಿದ್ದಂತೆಯೇ, ನಾಪತ್ತೆಯಾಗಿದ್ದಾರೆ. ಈ ಖಾನ್ ಸರ್ ಹಾಗೂ ಆತನ ಖಾಸಗಿ ತರಬೇತಿ ಸಂಸ್ಥೆಯಲ್ಲಿನ ಇತರ 5 ಮಂದಿ ರೈಲ್ವೆ ಉದ್ಯೋಗದ ಆಕಾಂಕ್ಷಿಗಳಿಗೆ ಹಿಂಸಾಚಾರ ನಡೆಸಲು ಪ್ರಚೋದನೆ ನೀಡಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.
ರೈಲ್ವೆ ನೇಮಕಾತಿ ಮಂಡಳಿಯ ತಾಂತ್ರಿಕೇತರ ಪಾಪ್ಯುಲರ್ ವಿಭಾಗ (ಎನ್ ಟಿಪಿಸಿ) ಪರೀಕ್ಷೆಗಳು ರದ್ದುಗೊಂಡಿದ್ದರ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಖಾನ್ ಸರ್ ಎಂಬಾತ ಜನಪ್ರಿಯ ಯೂಟ್ಯೂಬರ್ ಸಹ ಆಗಿದ್ದು, ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ಪ್ರೇರೇಪಿಸಿದ ಆರೋಪದಲ್ಲಿ ಆತನ ಸಹೋದ್ಯೋಗಿಗಳ ವಿರುದ್ಧವೂ ಪ್ರಕರಣ ದಾಖಲಾಗಿದೆ.