ಕಾಸರಗೋಡು: ಗ್ರಾಹಕರ ಅಭಿರುಚಿಗೆ ತಕ್ಕಂತೆ ಇನ್ನುಮುಂದೆ ರೇಶನ್ ಅಂಗಡಿಗಳ ಮೂಲಕ ಅಕ್ಕಿ ವಿತರಣೆ ನಡೆಯಲಿದೆ. ಬೆಳ್ತಿಗೆ, ಕೆಂಪು ಯಾ ಬಿಳಿ ಕುಚ್ಚಲು ಅಕ್ಕಿ ವಿತರಿಸುವ ನಿಟ್ಟಿನಲ್ಲಿ ಭಾರತದ ಆಹಾರ ನಿಗಮದೊಂದಿಗೆ ಚರ್ಚಿಇಸಿರುವುದಾಗಿ ಕೇರಳ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಜಿ.ಆರ್. ಅನಿಲ್ ತಿಳಿಸಿದ್ದಾರೆ.
ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ಬಹುತೇಕ ಮಂದಿ ಕೆಂಪು ಹಾಗೂ ಬಿಳಿ ಕುಚ್ಚಲು ಅಕ್ಕಿ ಬಳಸುತ್ತಿದ್ದು, ಆಯಾ ತಾಲೂಕಿನ ಜನತೆಯ ಅಭಿರುಚಿಗೆ ತಕ್ಕಂತೆ ಫೆಬ್ರವರಿ ತಿಂಗಳಿಂದ ಅಕ್ಕಿ ಪೂರೈಕೆ ನಡೆಯಲಿದೆ. ಪಡಿತರ ಅಂಗಡಿಗಳ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸಪ್ಲೈಕೋ ಮೂಲಕ ವಿತರಣೆಯಾಗುವ ಸಾಮಗ್ರಿಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಚರ್ಚೆ ಮುಂದುವರಿದಿದೆ. ಭಾರತೀಯ ಆಹಾರ ನಿಗಮ ಗೋದಾಮುಗಳಲ್ಲಿನ ಅಕ್ಕಿಯ ಗುಣಮಟ್ಟ ತಪಾಸಣೆ ನಡೆಸಿದ ನಂತರ ಹೊಸ ತೀರ್ಮಾನ ಜಾರಿಗೊಳ್ಳಲಿದೆ ಎಂದು ಕಾಸರಗೋಡಿನಲ್ಲಿ ಪಡಿತರ ಅಂಗಡಿಗಳ ಕುರಿತಾಗಿ ನಡೆದ ಅದಾಲತ್‍ನ ನಂತರ ಸುದ್ದಿಗಾರರ ಜತೆ ಮಾತನಾಡಿದರು.