ಬದಿಯಡ್ಕ: ಹಿಂದೂ ಸಮಾಜಕ್ಕೆ ದೇವಸ್ಥಾನಗಳನ್ನು ಸಮರ್ಥವಾಗಿ ಮುನ್ನಡೆಸುವ ಶಕ್ತಿಯಿದೆ. ಸರ್ಕಾರದ ಆಡಳಿತದಿಂದ ದೇವಸ್ಥಾನಗಳು ಸಂಪೂರ್ಣವಾಗಿ ಮುಕ್ತವಾಗಿ ಖಾಸಗಿ ಒಡೆತನಕ್ಕೆ ಬರಬೇಕಾಗಿದೆ. ಹಿಂದೂ ಧಾರ್ಮಿಕ ಶ್ರದ್ಧಾಳುಗಳ ನೇತೃತ್ವದಲ್ಲಿ ದೇವಸ್ಥಾನಗಳು ಇನ್ನೂ ಉತ್ತಮ ವ್ಯವಸ್ಥೆಯನ್ನು ಮಾಡಬಲ್ಲದು ಎಂಬುದನ್ನು ನಾವು ಮನಗಾಣಬೇಕಾಗಿದೆ ಎಂದು ಪ್ರಖ್ಯಾತ ಚಿಂತಕ, ಲೇಖಕ ಡಾ.ರಾಮ್ ಮಾಧವ್ ನವದೆಹಲಿ ಹೇಳಿದರು.
ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನ ಮಂದಿರದಲ್ಲಿ ಶನಿವಾರ ನಡೆದ ಪಾಂಚಜನ್ಯ ಸಭಾ ಭವನದ ಲೋಕಾರ್ಪಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ದೇವಸ್ಥಾನಗಳು ಧಾರ್ಮಿಕ ಶ್ರದ್ಧಾಕೇಂದ್ರವಾಗಿದೆ. ಹಿಂದುಗಳು ಎಲ್ಲಾ ಕಡೆಯೂ ದೇವರಿದ್ದಾನೆ ಎಂದು ಭಾವಿಸುವ ಮಂದಿ. ಧರ್ಮದ ಮನೆಯಾಗಿ, ಸಂಸ್ಕøತಿಯ ಕೇಂದ್ರವಾಗಿ, ಧರ್ಮದ ಪ್ರತೀಕವಾಗಿ ದೇವಸ್ಥಾನಗಳು ವಿಕಸಿತಗೊಳ್ಳುತ್ತದೆ. ಮೂರ್ತಿ ಕೇವಲ ಪೂಜೆಗೆ ಒಳಪಡುತ್ತಿರುವ ಅಂಶ ಮಾತ್ರ ಅಲ್ಲ. ಅದು ಜೀವನದ ಎಲ್ಲಾ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಸಮಾಜದಲ್ಲಿ ಎಲ್ಲರೂ ಒಟ್ಟಿಗೆ ಒಂದಾಗಿ ಬಾಳುವಂತಹ ಸನಾತನ ಮೌಲ್ಯಗಳನ್ನು ಸಾರುತ್ತವೆ. ಧÀರ್ಮ ಒಂದು ಸಾರ್ವಜನಿಕ ತೆರೆದ ಮನಸ್ಸಿನ ಚಟುವಟಿಕೆ ಆಗಿದೆ. ಎಲ್ಲರೂ ಒಗ್ಗಟ್ಟಿನಿಂದ ಕಳೆಯುವಂತಹ ವಾತಾವರಣ ಇಲ್ಲಿ ಇರುತ್ತದೆ. ದೇವಸ್ಥಾನ ಕೇಂದ್ರಿತ ಸಾಮಾಜಿಕ ಚಟುವಟಿಕೆಗಳು ಹೆಚ್ಚಾಗಿ ಮೂಡಿಬರಬೇಕು. ಇತರರಿಗಾಗಿ ಬದುಕಿದರೆ ಮೋಕ್ಷ ಲಭಿಸುತ್ತದೆ. ದೇವಸ್ಥಾನಗಳು ಆಹಾರ, ಆರೋಗ್ಯ, ಶಿಕ್ಷಣ ಕೊಡುವ ಕೇಂದ್ರಗಳಾಗಬೇಕು. ಪ್ರಾಚೀನ ಭಾರತದಲ್ಲಿ ಹಸಿವು ಎಂಬುದು ಇರಲಿಲ್ಲ. ಯಾಕೆಂದರೆ ದೇವಸ್ಥಾನಗಳು ಸಮಾಜದ ಹಸಿವನ್ನು ನೀಗಿಸುತ್ತಿತ್ತು. ನುರಿತ ತಜ್ಞರು ಸಂತರು, ವಾಗ್ಮಿಗಳಿಂದ ಉಪನ್ಯಾಸಗಳು ನಿರಂತರವಾಗಿ ಮೂಡಿಬರಬೇಕು. ಇಂತಹ ಸಭಾಂಗಣಗಳು ಎಲ್ಲಾ ದೇವಾಲಯಗಳಲ್ಲೂ ಮೂಡಿಬರುವುದರೊಂದಿಗೆ ಸಮಾಜದ ಉತ್ತಮ ಚಟುವಟಿಕೆಗಳ ಕೇಂದ್ರವಾಗಲಿ. ಸಂತ, ಸಮಾಜದ ಆಡಳಿತಕ್ಕೆ, ಒಡೆತನಕ್ಕೆ ಎಲ್ಲ ದೇವಸ್ಥಾನಗಳು ಬರಬೇಕು. ದೇವಸ್ಥಾನಗಳ ಒಡೆತನವನ್ನು ಹಿಂದೂ ಸಮಾಜವು ವಹಿಸಿಕೊಳ್ಳಬೇಕು ಎಂದರು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ದೀಪಬೆಳಗಿಸಿ ಸಭಾ ಭವನವನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನವನ್ನು ನೀಡಿದರು. ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕಾರ್ಯಕಾರಿಣಿ ಮಂಡಳಿ ಆಮಂತ್ರಿತ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಧಾರ್ಮಿಕ ಭಾಷಣ ಮಾಡಿದರು.