ಭಾರತೀಯ ಪರಂಪರೆಯಲ್ಲಿ ದೈವ ದೇವರುಗಳಿಗೆ ನೀಡಿರುವಷ್ಟು ಮಹತ್ವಪೂರ್ಣ ಪರಿಕಲ್ಪನೆ ಬೇರೊಂದೆಡೆ ಲಭ್ಯವಾಗದು. ಧನಾತ್ಮಕ ಶಕ್ತಿ ಸಂಚಯನದ ಕೇಂದ್ರಗಳಾದ ದೇವಾಲಯಗಳ ರಚನೆ, ಅಲ್ಲಿಯ ವಿವಿಧ ಆಚಾರ ಅನುಷ್ಠಾನಗಳ ಹಿಂದೆ ವೈಜ್ಞಾನಿಕ ಹಿನ್ನೆಲೆಯ ವಿಶಿಷ್ಟತೆ ಅಡಗಿದ್ದು ಜನರ ಜೀವನವನ್ನು ಸುಖಮಯ, ಸಂತುಷ್ಠಗೊಳಿಸಲು ಪ್ರಧಾನ ಭೂಮಿಕೆಯೊದಗಿಸುತ್ತದೆ.
ನಾವು ವಾಸಿಸುವ ಮನೆ-ಮಠಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಕಾಲಾನುಕಾಲಕ್ಕೆ ಹೇಗೆ ಮಾರ್ಪಾಟುಗೊಳಿಸುತ್ತೇವೆಯೋ ಹಾಗೆಯೇ ನಾವು ಆರಾಧಿಸುವ ದೇವಾಲಯ, ಮಂದಿರ, ವನಗಳಿಗೂ ಪುನರುಜ್ಜೀವನ ನೀಡುವ ಕ್ರಮಗಳು ಅನೂಚವಾಗಿ ಸಾಗಿಬಂದಿದೆ. ಬ್ರಹ್ಮಕಲಶ, ಪ್ರತಿಷ್ಠೆಗಳ ಮೂಲಕ ನಮ್ಮ ಬದುಕಿನ ಹೊಸ ಆವಿಷ್ಕಾರಗಳನ್ನು ನಾವಿಂದು ಅಳವಡಿಸಿಕೊಳ್ಳುತ್ತೇವೆ.
ಸನಾತನ ಆಧ್ಯಾತ್ಮಿಕತೆಯಲ್ಲಿ ಸುಬ್ರಹ್ಮಣ್ಯ ದೇವರ ಆರಾಧನೆಗೆ ಹೆಚ್ಚಿನ ಮಹತ್ವವಿದೆ. ಈತ ಖಡ್ಗ, ತ್ರಿಶೂಲ, ಧನಸ್ಸು, ಚಕ್ರ, ಪಾಶ, ವಜ್ರ, ಅಂಕುಶ ಬಾಣಗಳನ್ನು ಆಯುಧಗಳನ್ನಾಗಿ ಹೊಂದಿ ಅಭಯಹಸ್ತ ತೋರಿಸುತ್ತಾ ದರ್ಶನ ಕೊಡುವನು. ವಿಶೇಷ ಹಬ್ಬದಂದು ಸರ್ಪದ ರೂಪದಲ್ಲಿ ದರ್ಶನ ನೀಡುವನು. ಯೋಗ ಸಾಧನೆ ಸಂದರ್ಭದಲ್ಲಿ ಜಾಗೃತಗೊಂಡು ಕುಂಡಲಿನೀ ಶಕ್ತಿ ಸಹಸ್ರಾರವನ್ನು ಸೇರುವವರೆಗೆ ಮಧ್ಯದಲ್ಲಿರುವ ಚಕ್ರಗಳನ್ನು ಸುರುಳಿಯಂತೆ ಸರ್ಪಗಳ ರೂಪದಲ್ಲಿ ಸುತ್ತುತ್ತಾ ವ್ಯಾಪಿಸಿಕೊಂಡಿರುತ್ತದೆ. ಆದ್ದರಿಂದ ಸುಬ್ರಹ್ಮಣ್ಯನನ್ನು ಸರ್ಪದ ರೂಪದಲ್ಲಿ ಆರಾಧಿಸುವ ಪರಂಪರೆಯೂ ಇದೆ.
ಸುಬ್ರಹ್ಮಣ್ಯ ಕುಜನಾಗಿದ್ದು...ಸುಬ್ರಹ್ಮಣ್ಯನ ಎಲ್ಲಾ ಗುಣಗಳನ್ನು ಪರಾಶರ ಮುನಿಯು ಕುಜನಲ್ಲಿ (ಅಂಗಾರಕನಲ್ಲಿ) ತುಂಬಿದರು. ಸುಬ್ರಹ್ಮಣ್ಯನ ಉಪಾಸನೆಗೆ ಕುಜನು ಕಾರಕನೆಂದು ಕಶ್ಯಪರು, ಅತ್ರಿಗಳು ಮತ್ತು ಕಣ್ವರು ತಿಳಿಸಿದ್ದಾರೆ. ಅಗ್ನಿಯಿಂದ ಜನಿಸಿದ ಸುಬ್ರಹ್ಮಣ್ಯ ಅಗ್ನಿತತ್ವ, ಜಲದಿಂದ ಜನಸಿದ್ದರಿಂದ ಜಲತತ್ವ, ಭೂಸ್ಪರ್ಶದಿಂದ ಜನಿಸಿದ್ದರಿಂದ ಭೂತತ್ವ, ಆಕಾಶಮಾರ್ಗದಿಂದ ಜನಿಸಿದ್ದರಿಂದ ಅಗ್ನಿವೀರ್ಯ ಆಕಾಶತತ್ವ, ವಾಯುವಿನಿಂದ ಬಂದಿರುವುದರಿಂದ ವಾಯುತತ್ವ ಹೀಗೆ ಪಂಚಭೂತಗಳಲ್ಲಿ ಹುಟ್ಟಿದುದರಿಂದ ಅವನನ್ನು ಉಪಾಸನೆ ಮಾಡಿದರೆ ಪಂಚಪಾತಕ ದೋಷಗಳು ನಿವಾರಣೆ ಆಗುತ್ತವೆ ಎಂಬ ನಂಬಿಕೆ ನಮ್ಮ ಪರಂಪರೆಯದ್ದು.
ಹಿಂದೆ ತಾರಕಾಸುರನೆಂಬ ರಾಕ್ಷಸನು ಗರ್ವಿಷ್ಟನಾಗಿ ಸಕಲ ಲೋಕದ ಜನರಿಗೆ ಮತ್ತು ದೇವತೆಗಳಿಗೆ ಹಿಂಸೆ ನೀಡುತ್ತಿದ್ದನು. ಅನೇಕ ವಿಧವಾಗಿ ಕಷ್ಟಗಳಿಗೆ ಗುರಿಯಾದ ದೇವತೆಗಳು ಈ ವಿಷಯದ ಕುರಿತು ಬ್ರಹ್ಮದೇವನಿಗೆ ಮೊರೆಯಿಟ್ಟರು. ಅದಕ್ಕೆ ಬ್ರಹ್ಮ ದೇವನು ಶಿವನು ಈಗ ಘೋರವಾದ ತಪಸ್ಸನ್ನು ಬಿಟ್ಟು ಪಾರ್ವತಿಯನ್ನು ವಿವಾಹ ಮಾಡಿಕೊಂಡರೆ ಅವನಿಗೆ ಜನಿಸುವ ಕುಮಾರನು ತಾರಕಾಸುರನನ್ನು ಸಂಹಾರ ಮಾಡುವನು ಎಂದನು. ದೇವತೆಗಳು ಶಿವನ ತಪೆÇೀಭಂಗ ಮಾಡಲು ಮನ್ಮಥನನ್ನು ಕಳುಹಿಸಿದರು. ಶಿವನು ತನ್ನ ಮೂರನೆಯ ಕಣ್ಣನ್ನು ತೆರೆದು ಮನ್ಮಥನನ್ನು ದಹಿಸಿ, ತನ್ನ ಸೇವೆ ಮಾಡುತ್ತಿದ್ದ ಪಾರ್ವತಿಯನ್ನು ವಿವಾಹ ಮಾಡಿಕೊಂಡನು. ಅವರಿಬ್ಬರೂ ಶೃಂಗಾರದಲ್ಲಿದ್ದ ಸಂದರ್ಭದಲ್ಲಿ ಶಿವನ ರೇತಸ್ಸು ಕೆಳಗೆ ಬಿದ್ದಿತು. ಭೂಮಿಯು ಅದನ್ನು ಭರಿಸಲಾಗದೆ ಅಗ್ನಿಯೊಳಗೆ ಹಾಕಿತು. ಅದನ್ನು ಅಗ್ನಿ ಭರಿಸಲಾರದೆ ಗಂಗೆಯಲ್ಲಿ ಹಾಕಿತು. ಗಂಗೆಯು ತನ್ನ ದಡದಲ್ಲಿದ್ದ ಶರವಣ ಮುನಿಗೆ ನೀಡಿದಳು. ಅಲ್ಲಿಯೇ ಶ್ರಿ? ಸುಬ್ರಹ್ಮಣ್ಯ ಸ್ವಾಮಿ ಜನಿಸಿದನು. ಆದ್ದರಿಂದ ಸುಬ್ರಹ್ಮಣ್ಯನಿಗೆ ಇನ್ನೊಂದು ಹೆಸರು, ಶರವಣಭವ. ಈ ಹೆಸರಿನ ಒಂದೊಂದು ಅಕ್ಷರಕ್ಕೂ ವಿಶೇಷ ಅರ್ಥವಿದೆ. 'ಶ' ಎಂದರೆ ಲಕ್ಷ್ಮೇಬೀಜಂ, 'ರ' ಎಂದರೆ ಅಗ್ನಿ ಬೀಜ, 'ವ' ಎಂದರೆ ಅಮೃತ ಬೀಜ, 'ಣ' ಎಂದರೆ ಯಕ್ಷ ಬೀಜ, 'ಭ' ಎಂದರೆ ಅರುಣ ಬೀಜ, 'ವ' ಎಂದರೆ ಅಮೃತ ಬೀಜ ಎಂದು. ಸುಬ್ರಹ್ಮಣ್ಯನು ಆರು ಮುಖ ಹೊಂದಿರುವುದರಿಂದ ಈತನನ್ನು ಷಣ್ಮುಖ ಎನ್ನುವರು. ಆರು ಮುಖದ ಬಣ್ಣಗಳು ಬಿಳಿ, ಕಪ್ಪು, ಕೆಂಪು, ಕುಂದು, ಚಿತ್ರವರ್ಣ ಮತ್ತು ಹಳದಿ.
ಶ್ರೀಕಂಠಪ್ಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಕುಕ್ಕಂಕೂಡ್ಲು
ಬೇಳ ಅಂಚೆ, ಕುಂಬಳೆ ದಾರಿ, ಕಾಸರಗೋಡು ಜಿಲ್ಲೆ - 671321
ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ
ಬ್ರಹ್ಮಕಲಶೋತ್ಸವ
ದಿನಾಂಕ : 22-01-2022 ಶನಿವಾರದಿಂದ 30-01-2022 ರವಿವಾರ ತನಕ
ಸ್ವಸ್ತಿ ಶ್ರೀ ಪ್ಲವ ನಾಮ ಸಂವತ್ಸರದ ಮಕರ ಮಾಸ 8ರಿಂದ 16ರ ತನಕ ತಾರೀಕು 22-01-2022ನೇ ಶನಿವಾರದಿಂದ ತಾ.30-02-2022ನೇ ಭಾನುವಾರದ ವರೆಗೆ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಯವರ ನೇತೃತ್ವದಲ್ಲಿ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ.
..............
ಇಂದು ಪುನಃ ಪ್ರತಿಷ್ಠಾ ಬ್ರಹ್ಮಕಲಶ
ಬೆಳಗ್ಗೆ 5 ಗಂಟೆಗೆ ಗಣಪತಿ ಹೋಮ, ಕವಾಟೋದ್ಘಾಟನೆ, ಶಾಂತಿ ಹೋಮಕಲಶ, ಪ್ರಾಯಶ್ಚಿತ್ತ ಹೋಮ ಕಲಶ, ತತ್ವಹೋಮ ಕಲಶಾಭಿಷೇಕ. ಬೆಳಗ್ಗೆ 9.10ರ ನಂತರ ಶುಭಲಗ್ನದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮತ್ತು ಪರಿವಾರ ದೇವರುಗಳಿಗೆ ಬ್ರಹ್ಮಕಲಶಾಭಿಷೇಕ, ಅವಭೃತ ಪ್ರೋಕ್ಷಣೆ. 12.30ಕ್ಕೆ ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.
ಹಿನ್ನೆಲೆ:
ಕುಂಬಳೆ ಸೀಮೆಯ ಬೇಳ ಗ್ರಾಮದ ಇತಿಹಾಸ ಪ್ರಸಿದ್ಧವಾದ ಕುಕ್ಕಂಕೂಡ್ಲು ಶ್ರೀ ಕಂಠಪ್ಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನವು ಪುರಾತನವೂ ಕಾರಣೀಕವೂ ಆಗಿರುವ ದೇವಸ್ಥಾನವಾಗಿದೆ. ಗ್ರಾಮೀಣ ಪ್ರದೇಶದಲ್ಲಿರುವ ಈ ದಿವ್ಯ ಸನ್ನಿಧಿಯು ನಂಬಿದ ಭಕ್ತಜನರ ಇಷ್ಟಾರ್ಥಗಳನ್ನು ಈಡೇರಿಸಿಕೊಂಡು ಬರುತ್ತಿರುವ ಪುಣ್ಯಕ್ಷೇತ್ರವಾಗಿದೆ. ವಿದ್ಯಾನಗರ ಮುಂಡಿತ್ತಡ್ಕ ರಸ್ತೆಯ ಕೊಲ್ಲಂಗಾನದಿಂದ ಒಂದೂವರೆ ಕಿಲೋಮೀಟರ್ ಉತ್ತರಕ್ಕೂ, ನೀರ್ಚಾಲು ಮಧೂರು ರಸ್ತೆಯ ಬಿರ್ಮಿನಡ್ಕದಿಂದ ಸುಮಾರು ಒಂದೂವರೆ ಕಿಲೋಮೀಟರು ದಕ್ಷಿಣ ದಿಕ್ಕಿಗೂ ಶ್ರೀ ಕ್ಷೇತ್ರವಿದೆ.
ಹದಿನಾಲ್ಕನೇ ಶತಮಾನದಲ್ಲಿ ಬೇಳವನ್ನು ಕೇಂದ್ರವಾಗಿ ಆಡಳಿತ ನಡೆಸುತ್ತಿದ್ದ ಮೂರನೇ ಜಯಸಿಂಹನ ಸಹೋದರಿ ರಾಜ್ಞಿಗೆ ಸ್ವಪ್ನದಲ್ಲಿ ಕಂಡುಬಂದತೆ ಇಲ್ಲಿ ದೇವಾಲಯದ ನಿರ್ಮಾಣವಾಯಿತೆಂಬ ಐತಿಹ್ಯವಿದೆ. ಕಿರುಷಷ್ಠಿಯ ಪುಣ್ಯದಿನದಂದು ಇಲ್ಲಿ ವಾರ್ಷಿಕ ಉತ್ಸವವು ವಿಜೃಂಭಣೆಯಿಂದ ನಡೆದುಬರುತ್ತಿದೆ. ಮರುದಿವಸ ಏಣಿಯರ್ಪಿನಿಂದ ಭಂಡಾರ ಬಂದು ಶ್ರೀ ವಿಷ್ಣುಮೂರ್ತಿ ದೈವದ ಕೋಲವನ್ನೂ ನಡೆಸಿಕೊಂಡು ಬರಲಾಗುತ್ತಿದೆ. ಇಲ್ಲಿ ಶ್ರೀ ಸುಬ್ರಹ್ಮಣ್ಯ ಅಲ್ಲದೆ ಶ್ರೀ ಮಹಾಗಣಪತಿ, ಶ್ರೀವನಶಾಸ್ತಾರ, ದೈವವಾಗಿ ರಕ್ತೇಶ್ವರಿಯನ್ನೂ ಆರಾಧಿಸಿಕೊಂಡು ಬರಲಾಗುತ್ತಿದೆ. ಗರ್ಭಗುಡಿಯ ಆಗ್ನೇಯ ಭಾಗದಲ್ಲಿರುವ ಗುಹಾದ್ವಾರಕ್ಕೆ ಪೂಜೆಯ ಬಳಿಕ ನಿತ್ಯವೂ ತೀರ್ಥಾಭಿಷೇಕವೂ ನಡೆಯುತ್ತಿರುವು ಇಲ್ಲಿನ ವಿಶೇಷತೆಯಾಗಿದೆ.
ಹಿಂದಿನ ಕಾಲದಲ್ಲಿ ರಾಜವಂಶಸ್ಥರ ಆಡಳಿತದಲ್ಲಿದ್ದ ದೇವಾಲಯದ ಆಡಳಿತವು ಮುಂದೆ ಕುಕ್ಕಂಕೂಡ್ಲು ಕೊಳತ್ತಾಯ ಮನೆತನದವರಿಗೂ ಆ ನಂತರ ಕುಂಬಳೆ ಸೀಮೆಯ ಪ್ರಸಿದ್ಧ ಮನೆತನಗಳಲ್ಲೊಂದಾದ ಕೋಡಿಂಗಾರು ಮನೆತನಕ್ಕೂ ವರ್ಗಾವಣೆಯಾಯಿತು. ಧರ್ಮಿಷ್ಠರೂ ಪರಮದೈವಭಕ್ತರೂ ಆಗಿದ್ದ ದಿ| ಯಜಮಾನ ತಿಮ್ಮಣ್ಣಾಳ್ವ, ಅವರ ತಮ್ಮ ದಿ| ಕವಿರಾಜ ಡಾ| ಕೆ.ಸಿ.ಆಳ್ವ, ಅವರ ಅಳಿಯ ದಿ. ಡಾ| ಶ್ಯಾಮಭಂಡಾರಿ ಮುಂತಾದವರ ಮುಂದಾಳುತ್ವದಲ್ಲಿ ಜೀರ್ಣಾವಸ್ಥೆಯಲ್ಲಿದ್ದ ದೇವಸ್ಥಾನವನ್ನು 1962ನೇ ಇಸವಿಯಲ್ಲಿ ಜೀರ್ಣೋದ್ಧಾರ ಪ್ರಕ್ರಿಯೆಗಳು ನೆರವೇರಿದ್ದವು.
ಸೈಡ್ ಕೋಟ್ಸ್:
ಪ್ರಾಚೀನ ಕಾಲದಿಂದ ವಿಶೇಷ ಪರಿಕಲ್ಪನೆಗಳೊಮದಿಗೆ ದೇವಾಲಯ ಪ್ರತಿಷ್ಠಾ ವಿಧಿಗಳನ್ನು ಆಗಮ ಶಾಸ್ತ್ರಾನುಸಾರ ನಿರ್ಣಯಿಸಲಾಗಿದೆ. ಈ ನಿಟ್ಟಿನಲ್ಲಿ ಮನುಷ್ಯ ದೇಹದ ಪರಿಕಲ್ಪನೆಯಲ್ಲೇ ಆಂತರ್ಯದ ಪ್ರತಿಬಿಂಬವೆನ್ನುವಂತೆ ಬಿಂಬಕ್ಕೆ ಜೀವ ಕಲೆ ನೀಡುವ ಪರಿಕಲ್ಪನೆಯೇ ಬ್ರಹ್ಮಕಲಶದ ಮೂಲಕ ಸಾಕಾರಗೊಳ್ಳುತ್ತದೆ. ವೈಜ್ಞಾನಿಕ ಆಧಾರದಲ್ಲೇ ವೈದಿಕ ವಿಧಿಗಳ ಅಂತರಗಂಗೆ ಹರಿಯುತ್ತಿದ್ದು, ಪ್ರತಿಯೊಂದು ಆಚರಣೆಗೂ ಅದರದ್ದೇ ಮಹತ್ವವಿದೆ. ಹೃದಯದ ಮೂಲಕ ಬಿಂಬಕ್ಕೆ ಚೈತನ್ಯ ನೀಡುವ ಪ್ರಕ್ರಿಯೆ ಅತ್ಯಂತ ಸೂಕ್ಷ್ಮವಾಗಿದ್ದು, ಭಕ್ತಿ, ಶ್ರದ್ದೆ ಮತ್ತು ಹಿರಿಯರ ಅನುಗ್ರಹದಿಂದ ಭವಿಷ್ಯದ ನೆಮ್ಮದಿಯ ಪ್ರತೀಕವಾಗಿ ದೇವಾಲಯಗಳು ಪುನರುತ್ಥಾನಗೊಂಡು ಸುಭಿಕ್ಷ ನೆಲಸುತ್ತದೆ.