HEALTH TIPS

ಮೋದಿ, ಕೇಜ್ರಿವಾಲ್ ಮಾಸ್ಕ್ ಧರಿಸದೇ ಸಾರ್ವಜನಿಕ ಚಟುವಟಿಕೆ: ಪಾಠ ಮಾಡಬೇಕಾದವರೇ ಕಲಿಯುವುದು ಯಾವಾಗ: ಖರ್ಗೆ

          ನವದೆಹಲಿ: 'ಪ್ರಧಾನಿ ನರೇಂದ್ರ ಮೋದಿ ಅವರೇ ಮಾಸ್ಕ್‌ ಧರಿಸದೆ ಕಾಣಿಸಿಕೊಳ್ಳುತ್ತಾರೆ. ಈ ಸರ್ಕಾರ ಯಾವಾಗ ಪಾಠ ಕಲಿಯುತ್ತದೆ?' ಎಂದು ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಖಾರವಾಗಿ ಪ್ರಶ್ನಿಸಿದ್ದಾರೆ.

          ಮುಂಬರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಹಲವು ರಾಜಕೀಯ ಪಕ್ಷಗಳು ಕೋವಿಡ್‌ 19 ಸೋಂಕು ಉಲ್ಬಣಗೊಳ್ಳುತ್ತಿರುವುದನ್ನು ಮರೆತು ಬೃಹತ್‌ ರ‍್ಯಾಲಿಗಳನ್ನು ಆಯೋಜಿಸುತ್ತಿವೆ.



            ಪ್ರಭಾವಶಾಲಿ ಮುಖಂಡರು ಮಾಸ್ಕ್‌ ಧರಿಸದೆ ಬೃಹತ್‌ ರ‍್ಯಾಲಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ ರಾಜಕಾರಣಿಗಳೂ ಮಾಸ್ಕ್‌ ಧರಿಸದಿರುವುದನ್ನೇ ಪರಸ್ಪರ ಟೀಕಾಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ.

             ವಾರದ ಹಿಂದಷ್ಟೇ ಪಂಜಾಬ್‌ ರ‍್ಯಾಲಿಯಲ್ಲಿ ಮಾಸ್ಕ್‌ ರಹಿತರಾಗಿ ಕಾಣಿಸಿಕೊಂಡಿದ್ದಕ್ಕೆ ಭಾರಿ ಟೀಕೆ ಎದುರಿಸಿದ್ದ ದೆಹಲಿ ಮುಖ್ಯಮಂತ್ರಿ ಆರವಿಂದ ಕೇಜ್ರಿವಾಲ್‌ ಅವರಿಗೆ ಕೋವಿಡ್‌ ದೃಢಪಟ್ಟಿದೆ.

    '3ನೇ ಅಲೆ ಸಕ್ರಿಯವಾಗಿದೆ. ಮುಂದಿನ ವಾರಗಳಲ್ಲಿ ಕೋವಿಡ್‌ ಪ್ರಕರಣಗಳ ಹಿಮಪಾತವಾಗಲಿದೆ. ಮೋದಿ ಸರ್ಕಾರ ಲಕ್ಷಾಂತರ ಮಂದಿಯ ಸಾವಿಗೆ ಕಾರಣವಾದ 2ನೇ ಅಲೆಯಲ್ಲಿ ಮಾಡಿದ ತಪ್ಪನ್ನೇ ಈಗಲೂ ಮಾಡುತ್ತಿದೆ. ಪ್ರಧಾನಿ ಮೋದಿ ಅವರೇ ಮಾಸ್ಕ್‌ ಧರಿಸದೆ ಕಾಣಿಸಿಕೊಳ್ಳುತ್ತಾರೆ. ಈ ಸರ್ಕಾರ ಯಾವಾಗ ಪಾಠ ಕಲಿಯುತ್ತದೆ' ಎಂದು ಮಲ್ಲಿಕಾರ್ಜುನ ಖರ್ಗೆ ಟ್ವೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

         ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮತ್ತು ಕೇಂದ್ರ‌ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರ್‌ದೀಪ್‌ ಪುರಿ ಅವರ ಜೊತೆ ಮಾಸ್ಕ್‌ ರಹಿತರಾಗಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವ ಫೋಟೊ ಮತ್ತು ವಿಡಿಯೊಗಳು ಇತ್ತೀಚೆಗೆ ಸಾಮಾಜಿಕ ತಾಣಗಳಲ್ಲಿ ಹರಿದಾಡಿದ್ದವು.

         ಮಹಾರಾಷ್ಟ್ರದ ನಾಸಿಕ್‌ನಲ್ಲಿ ಇತ್ತೀಚೆಗೆ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಶಿವಸೇನಾ ಸಂಸದ ಸಂಜಯ್‌ ರಾವುತ್‌ ಮಾಸ್ಕ್‌ ಧರಿಸದೆ ಕಾಣಿಸಿಕೊಂಡಿದ್ದರು. ಕೆಲವು ವರದಿಗಾರರು ಕೋವಿಡ್‌ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್‌ ಯಾಕೆ ಧರಿಸಿಲ್ಲ ಎಂದು ರಾವುತ್‌ ಅವರನ್ನು ಪ್ರಶ್ನಿಸಿದಾಗ, 'ಪ್ರಧಾನಿ ನರೇಂದ್ರ ಮೋದಿ ಜನರಿಗೆ ಮಾಸ್ಕ್‌ ಧರಿಸಲು ಹೇಳುತ್ತಾರೆ. ಆದರೆ, ಸ್ವತಃ ಅವರೇ ಮಾಸ್ಕ್‌ ಧರಿಸುವುದಿಲ್ಲ. ಮಹಾರಾಷ್ಟ್ರದ ಸಿಎಂ ಉದ್ಧವ್‌ ಠಾಕ್ರೆ ಮಾಸ್ಕ್‌ ಧರಿಸುತ್ತಾರೆ, ಆದರೆ ಮೋದಿ ರಾಷ್ಟ್ರ ನಾಯಕ. ನಾನು ಪ್ರಧಾನ ಮಂತ್ರಿಯನ್ನು ಅನುಸರಿಸುತ್ತೇನೆ. ಹಾಗಾಗಿ ನಾನು ಮಾಸ್ಕ್‌ ಧರಿಸುವುದಿಲ್ಲ. ಜನರೂ ಮಾಸ್ಕ್‌ ಧರಿಸುವುದಿಲ್ಲ' ಎಂದಿದ್ದರು.

         ಉತ್ತರ ಪ್ರದೇಶದಲ್ಲಿ ಮೋದಿ, ಗೃಹ ಸಚಿವ ಅಮಿತ್‌ ಶಾ ಹಲವು ರ‍್ಯಾಲಿಗಳಲ್ಲಿ ಪಾಲ್ಗೊಂಡಿದ್ದಾರೆ. ಕುಟುಂಬದ ಸದಸ್ಯರೊಬ್ಬರಿಗೆ ಕೋವಿಡ್‌ ದೃಢಪಟ್ಟ ಹಿನ್ನೆಲೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಪ್ರತ್ಯೇಕ ವಾಸದಲ್ಲಿದ್ದಾರೆ. ಪ್ರಿಯಾಂಕಾ ಅವರು ಹಲವು ರ‍್ಯಾಲಿಗಳಲ್ಲಿ ಭಾಗವಹಿಸಿದ್ದರು.

ಬಿಜೆಪಿಯ ಪಶ್ಚಿಮ ದೆಹಲಿ ಸಂಸದ ಪರ್ವೇಶ್‌ ಸಾಹಿಬ್‌ ಸಿಂಗ್‌ ಅವರು ಕೇಜ್ರಿವಾಲ್‌ ಅವರಿಗೆ ಬೇಗ ಕೋವಿಡ್‌ನಿಂದ ಗುಣಮುಖರಾಗುವಂತೆ ಹಾರೈಸುತ್ತಲೇ, ಚಂಡೀಗಡದಲ್ಲಿ ಮಾಸ್ಕ್‌ ರಹಿತರಾಗಿ ರ‍್ಯಾಲಿಯಲ್ಲಿ ಪಾಲ್ಗೊಂಡ ಬಗ್ಗೆಯೂ ಉಲ್ಲೇಖಿಸಿದ್ದರು.

             'ಅರವಿಂದ್‌ ಜೀ, ನಿಮ್ಮ ರಾಜಕೀಯ ಪ್ರವಾಸದಲ್ಲಿ ಕೋವಿಡ್‌ 19 ಸೋಂಕಿನ ಕುರಿತು ಎಚ್ಚರಿಕೆ ವಹಿಸಲಿಲ್ಲ. ನಿಮ್ಮಿಂದಾಗಿ ಜನರಿಗೂ ಸೋಂಕು ತಗುಲಿದೆ. ನಿಮಗೆ ಪ್ರಜೆಗಳ ಜೀವಕ್ಕಿಂತ ಮತ-ಬ್ಯಾಂಕ್‌ ಪ್ರಮುಖವಾಗಿದೆ. ನೀವು ಮುಂದಾಳತ್ವ ವಹಿಸಬೇಕು ಎಂದರೆ , ಸ್ವಯಂ 'ಪ್ರತ್ಯೇಕ ವಾಸ'ದಲ್ಲಿರಬೇಕು. ದೆಹಲಿ ನಿಮ್ಮನ್ನು ಗಮನಿಸುತ್ತಿದೆ' ಎಂದು ಟ್ವೀಟ್‌ ಮೂಲಕ ಪರ್ವೇಶ್‌ ಕುಟುಕಿದ್ದರು.

         ಸಾಮಾಜಿಕ ತಾಣಗಳಲ್ಲಿ ಕೇಜ್ರಿವಾಲ್‌ ಅವರನ್ನು ಕೆಲವರು 'ಸೂಪರ್‌ ಸ್ಪ್ರೆಡ್ಡರ್‌' ಎಂದು ಟೀಕಿಸಿದ್ದಾರೆ. 2020ರ ಮಾರ್ಚ್‌ ತಿಂಗಳಲ್ಲಿ ದೆಹಲಿಯ ತಬ್ಲಿಘಿ ಜಮಾತ್‌ ಸಭೆಯನ್ನು ಗುರಿಯಾಗಿಸಿದ್ದನ್ನು ಉಲ್ಲೇಖಿಸಿ ಕೇಜ್ರಿವಾಲ್‌ ವಿರುದ್ಧ ಹರಿಹಾಯ್ದಿದ್ದಾರೆ.

          ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಸುತ್ತಿರುವ ಬಗ್ಗೆ ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದಾರೆ. ಆದರೆ ರಾಜಕೀಯ ಪಕ್ಷಗಳು ಚುನಾವಣೆಯನ್ನು ಮುಂದೂಡದಂತೆ ಚುನಾವಣಾ ಆಯೋಗಕ್ಕೆ ಒತ್ತಾಯಿಸುತ್ತಿವೆ.

           ಬಿಜೆಪಿ ಸಂಸದ ವರುಣ್‌ ಗಾಂಧಿ ಅವರು ಕಳೆದ ವಾರ ರಾತ್ರಿ ಕರ್ಫ್ಯೂ ಬಗ್ಗೆ ಪ್ರಶ್ನಿಸಿದ್ದರು. ಕೋವಿಡ್‌ 19 ಮತ್ತು ಓಮೈಕ್ರಾನ್‌ ಆತಂಕದ ನಡುವೆ ರಾಜಕೀಯ ರ‍್ಯಾಲಿಗಳನ್ನು ನಡೆಸಲು ಅವಕಾಶ ನೀಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries