ಕಾಸರಗೋಡು: ಹೊಸವರ್ಷಾಚರಣೆ ಹಿನ್ನೆಲೆಯಲ್ಲಿ ಬೀವರೇಜಸ್ ಔಟ್‍ಲೆಟ್‍ನಿಂದ ತನ್ನ ವಾಸಸ್ಥಳಕ್ಕೆ ಮದ್ಯ ಕೊಂಡೊಯ್ಯುತ್ತಿದ್ದ ವಿದೇಶಿ ಪ್ರಜೆಯನ್ನು ಅವಮಾನಿಸಿದ ಆರೋಪದಲ್ಲಿ ತಿರುವನಂತಪುರ ಕೋವಳಂ ಪೊಲೀಸ್ ಠಾಣೆ ಗ್ರೇಡ್ ಎಸ್.ಐಯನ್ನು ಅಮಾನತುಗೊಳಿಸಲಾಗಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಅನಿಲ್‍ಕಾಂತ್ ಅವರ ಶಿಫಾರಸಿನ ಮೇರೆಗೆ ಈ ಕ್ರಮ ಕ್ರಗೊಳ್ಳಲಾಗಿದೆ. ಸರ್ಕಾರದ ಬೀವರೇಜಸ್ ಔಟ್‍ಲೆಟ್‍ನಿಂದ ಮದ್ಯ ಖರೀದಿಸಿರುವ ಮಾಹಿತಿ ತಿಳಿದೂ, ವಿದೇಶಿ ಪ್ರವಾಸಿಯನ್ನು ರಸ್ತೆಮಧ್ಯೆ ತಡೆದುನಿಲ್ಲಿಸಿ ಅವಮಾನಗೊಳಿಸಿರುವುದಾಗಿ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ. ಕೋವಳಂನ ಖಾಸಗಿ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದ ಸ್ವೀಡನ್ ಪ್ರಜೆ ಸ್ಟೀಫನ್ ಅಸ್ಬೊರ್ಗ್(68)ಎಂಬವರು ತಮ್ಮ ದ್ವಿಚಕ್ರ ವಾಹನದಲ್ಲಿ ಮೂರು ಬಾಟಲಿ ವಿದೇಶಿ ಮದ್ಯದೊಂದಿಗೆ ವಾಸಸ್ಥಳಕ್ಕೆ ತೆರಳುತ್ತಿದ್ದಾಗ ಪೊಲೀಸರು ವಾಹನ ತಡೆದು ತಪಾಸಣೆ ನಡೆಸಿದಾಗ ಮದ್ಯ ಪತ್ತೆಯಾಗಿತ್ತು. ಮದ್ಯ ಖರೀದಿಸಿದ ಬಿಲ್ ನೀಡುವಂತೆ ಪೊಲೀಸರು ಒತ್ತಾಯಿಸಿದ್ದಾರೆ. ಬಿಲ್ ಮರೆತು ಬಂದಿರುವುದಾಗಿ ತಿಳಿಸಿದರೂ ಕೇಳದಾದಾಗ ಸ್ಟೀಫನ್ ತನ್ನ ಕೈಯಲ್ಲಿದ್ದ ಎರಡು ಬಾಟಲಿ ಮದ್ಯವನ್ನು ಸಾರ್ವಜನಿಕರ ಎದುರೇ ರಸ್ತೆ ಅಂಚಿಗೆ ಸುರಿದಿದ್ದಾರೆ. ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯದೆ ತನ್ನ ಚೀಲದೊಳಗೆ ಹಾಕಿಕೊಳ್ಳುವ ಮೂಲಕ ಶುಚಿತ್ವವನ್ನೂ ಕಾಪಾಡಿಕೊಂಡಿರುವುದು ವ್ಯಾಪಕ ವೈರಲ್ ಆಗಿದೆ. ಪೊಲೀಸರ ವರ್ತನೆಯಿಂದ ಮನನೊಂದು ಮದ್ಯ ತಿಪ್ಪೆಗೆ ಸುರಿದಿರುವುದಾಗಿ ಸ್ಟೀಫನ್ ತಿಳಿಸಿದ್ದರು. ವಿದೇಶಿ ಪ್ರಜೆಯನ್ನು ಅವಮಾನಿಸಿದ ಕ್ರಮದ ವಿರುದ್ಧ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಡಿಜಿಪಿಯಲ್ಲಿ ವರದಿ ಕೇಳಿದ್ದರು.