ಉಪ್ಪಳ: ಇತಿಹಾಸ ಪ್ರಸಿದ್ದ ಉಪ್ಪಳ ಐಲ ಮೈದಾನವನ್ನು ಅತಿಕ್ರಮಿಸುವ ಯತ್ನವನ್ನು ನಾಗರಿಕರ ಒಗ್ಗಟ್ಟಿನ ಪ್ರಯತ್ನದ ಕಾರಣ ಹಿಮ್ಮೆಟ್ಟಲಾಗಿದೆ.
ವಿವಾದ ನೆಲೆಗೊಂಡಿರುವ ಐಲ ಮೈದಾನದ ಮೂಲಕ ಯಾರ ಅರಿವಿಗೂ ಬಾರದಂತೆ ಬ್ಲಾಕ್ ಪಂಚಾಯತಿ ರಸ್ತೆ ನಿರ್ಮಿಸಲು ಯತ್ನಿಸಿದ್ದು, ನಾಗರಿಕರ ಒಗ್ಗಟ್ಟಿನ ಪ್ರತಿಭಟನೆಗೆ ಬೆದರಿ ಅಧಿಕೃತರು ಕೊನೆಗೂ ಹಿಂದೆ ಸರಿದಿದ್ದಾರೆ. ರಜಾದಿನವಾದ ಭಾನುವಾರ ಮೈದಾನದಲ್ಲಿ ಹೊಂಡಗಳನ್ನು ತೋಡಿ ಡಾಮರ್ ಬ್ಯಾರಲ್ ಗಳನ್ನು ತಲುಪಿಸಿ ಡಾಮರೀಕರಣ ನಡೆಸುವ ಸಿದ್ದತೆ ನಡೆಸಲಾಗಿತ್ತು. ವಿಷಯ ತಿಳಿದು ಸೋಮವಾರ ಬೆಳಿಗ್ಗೆ ಜಮಾಯಿಸಿದ ಸ್ಥಳೀಯ ನಾಗರಿಕರು ಪ್ರತಿಭಟಿಸಿದರು. ಈ ವೇಳೆ ಮಂಜೇಶ್ವರ ಪೋಲೀಸರೂ ಆಗಮಿಸಿದರು. ಜೊತೆಗೆ ಆಗಮಿಸಿದ ವಾರ್ಡ್ ಸದಸ್ಯ ಹಾಗೂ ಮತ್ತೊಂದು ವಾರ್ಡ್ ಸದಸ್ಯರು ರಸ್ತೆ ಕೆಲಸ ಮೊಟಕುಗೊಳಿಸಿರುವುದಾಗಿ ಪೋಲೀಸರಿಗೆ ಹಾಗೂ ನಾಗರಿಕರಿಗೆ ಮಾಹಿತಿ ನೀಡಿದರು. ಬಳಿಕ ನಾಗರಿಕರು ಮರಳಿದರು.
ಐಲ ಶ್ರೀಕ್ಷೇತ್ರದ ನಿಯಂತ್ರಣದಲ್ಲಿರುವ ಸುಮಾರು ಏಳು ಎಕ್ರೆಗಳಷ್ಟು ಮೈದಾನವನ್ನು ಕ್ಷೇತ್ರದ ನಿಯಂತ್ರಣದಿಂದ ಹೊರತರಲು ಕಳೆದ ಕೆಲವು ಕಾಲಗಳಿಂದ ತೆರೆಮರೆಯಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಕೊನೆಗೆ ಸರ್ಕಾರ ಈ ವಿವಾದದಲ್ಲಿ ಮಧ್ಯೆ ಪ್ರವೇಶಿಸಿ ಈ ಮೈದಾನದಿಂದ ಒಂದು ಎಕ್ರೆಯನ್ನು ಗ್ರಾಮ ಪಂಚಾಯತಿಗೆ, ಒಂದು ಎಕ್ರೆ ತಾಲೂಕು ಕಚೇರಿ ನಿರ್ಮಾಣಕ್ಕೆ, ಮೂರು ಎಕ್ರೆಯನ್ನು ದೈವಸ್ವಂ ಗೆ ನೀಡಬೇಕೆಂದು ಒಪ್ಪಂದ ಮಾಡಲಾಗಿತ್ತು. ಆದರೆ ಇದಕ್ಕಿನ್ನೂ ಅಂಗೀಕಾರವಾಗಿಲ್ಲ. ಈ ರೀತಿಯಲ್ಲಿ ಸ್ಥಳ ವಿಭಜಿಸಿದಾಗ ಅದಕ್ಕೆ ಅನುಸಾರ ರಸ್ತೆ ನಿರ್ಮಾಣಕ್ಕೂ ನಿರ್ದೇಶಿಸಲಾಗಿದೆ. ಈ ಮಧ್ಯೆ ಬ್ಲಾಕ್ ಪಂಚಾಯತಿ ಅತಿಕ್ರಮಿಸಿ ರಸ್ತೆ ನಿರ್ಮಿಸಲು ಮುಂದಾಗಿರುವುದು ತೀವ್ರ ಪ್ರತಿಭಟನೆಗೆ ಕಾರಣವಾಗಿದೆ.