ಕಾಸರಗೋಡು: ತುಳು ರಂಗಭೂಮಿಗೆ ವೇಣು ಮಿತ್ರ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ಚಿತ್ರನಟ, ನಿರ್ದೇಶಕ ಕಾಸರಗೋಡು ಚಿನ್ನಾ ತಿಳಿಸಿದ್ದಾರೆ. ಅವರು ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ಹಿರಿಯ ರಂಗನಟ, ವೇಣುಮಿತ್ರ ಎಂದೇ ಖ್ಯಾತರಾಗಿದ್ದ ವೇಣುಗೋಪಾಲ್ ಅವರ ಶ್ರದ್ಧಾಂಜಲಿ ಸಮಾರಂಭದಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದರು. ಯವನಿಕಾ ಸಂಸ್ಥೆ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ವೇಣುಮಿತ್ರ ಅವರು ತಾವೇ ನಿರ್ದೇಶಿಸಿದ ನಾಟಕ ಮತ್ತು ಮೂಕಾಭಿನಯಗಳಲ್ಲಿ ಮನೋಜ್ಞ ಅಭಿನಯ ನೀಡುವ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದರು ಎಂದು ತಿಳಿಸಿದರು.
ಯವನಿಕಾ ಸಂಸ್ಥೆ ಅಧ್ಯಕ್ಷ ¸ಕೆ. ಸುಬ್ಬಣ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರಾದ ಸತೀಶ್ಚಂದ್ರ ಭಂಡಾರಿ ಕೋಳಾರು, ರಘು ಮೀಪುಗುರಿ, ಬಿ.ಕೆ ಪ್ರಕಾಶ್, ನಾಗರಾಜ ಉಪಸ್ಥಿತರಿದ್ದರು. ಯವನಿಕಾ ಕಾಸರಗೋಡು ಇದರ ಕಾರ್ಯದರ್ಶಿ ಉದಯಕುಮಾರ್ ಮನ್ನಿಪ್ಪಾಡಿ ಸವಾಗತಿಸಿ, ವಂದಿಸಿದರು.