ಬದಿಯಡ್ಕ: ನೀರ್ಚಾಲು ಸಮೀಪದ ಕುಕ್ಕಂಕೂಡ್ಲು ಶ್ರೀಕಂಠಪ್ಪಾಡಿ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿವಿಧ ಧಾರ್ಮಿಕ, ವೈದಿಕ ಕಾರ್ಯಕ್ರಮಗಳೊಂದಿಗೆ ಶನಿವಾರ ಪ್ರಾರಂಭಗೊಂಡಿತು. ಜ. 30ರ ವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಶನಿವಾರ ಬೆಳಿಗ್ಗೆ 8ಕ್ಕೆ ಗಣಪತಿ ಹವನ ನಡೆಯಿತು. 9.30 ರಿಂದ ಉಗ್ರಾಣ ಮುಹೂರ್ತ ಸಂಭ್ರಮದಿಂದ ನಡೆಯಿತು. ವಿವಿಧೆಡೆಗಳಿಂದ ಆಗಮಿಸಿದ ತಂಡಗಳಿಂದ ಫಲ ಕಾಣಿಕೆ ಸಮರ್ಪಣೆ ನಡೆಯಿತು. 10.30 ರಿಂದ ಬದಿಯಡ್ಕದ ಶ್ರೀಮಾತಾ ಹವ್ಯಕ ಭಜನಾ ಸಂಘದವರಿಂದ ಭಜನೆ ನೆರವೇರಿತು. 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು. ಸಂಜೆ 5.30 ರಿಂದ ತಂತ್ರಿವರ್ಯರ ಆಗಮನ, ಪೂರ್ಣಕುಂಭ ಸ್ವಾಗತ, ದೇವತಾ ಪ್ರಾರ್ಥನೆ, ಆಚಾರ್ಯವರಣ, ಪುಣ್ಯಾಹ ವಾಚನ, ಪ್ರಾಸಾದ ಶುದ್ದಿ, ಅಂಕುರಾರೋಹಣ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ ಹಾಗೂ ವಾಸ್ತು ಪುಣ್ಯಾಹಂತ ವಿಧಿಗಳು ನೆರವೇರಲಿದೆ. ಸಂಜೆ 6 ಕ್ಕೆ ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಆಗಮನ, ಧಾರ್ಮಿಕ ಸಭೆ ನಡೆಯಲಿದೆ. ಶ್ರೀಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಗೌರೀಶಂಕರ ರೈ, ಅಧ್ಯಕ್ಷತೆ ವಹಿಸುವರು. ಮಲ್ಲ ಕ್ಷೇತ್ರದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್, ಉಡುಪಿ ಪೂರ್ಣಪ್ರಜ್ಞ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಕೃಷ್ಣ ಕೊಳತ್ತಾಯ, ಹಿರಿಯ ಜ್ಯೋತಿಷ್ಯ ವಿದ್ವಾಂಸ ಕುಂಜಾರು ವೆಂಕಟೇಶ್ವರ ಭಟ್ ಪಾಲಕ್ಕಾಡ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಅವರು ಧಾರ್ಮಿಕ ಉಪನ್ಯಾಸ ನೀಡುವರು.
ರಾತ್ರಿ 8 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ.
ನಾಳಿನ ಕಾರ್ಯಕ್ರಮ:
ಜ.23 ರಂದು ಬೆಳಿಗ್ಗೆ 6 ರಿಂದ ಗಣಪತಿಹೋಮ, ಪ್ರಾಯಶ್ಚಿತ ಹೋಮ, ಚತುಘಶುದ್ದಿ, ಧಾರಾ ಆವಗಾಹ ಪಂಚಕ, ಅಂಕುರಪೂಜೆ ನಡೆಯಲಿದೆ. 10.30 ರಿಂದ ಭಜನೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ. ಸಂಜೆ 6ಕ್ಕೆ ಭಜನೆ, 6ರಿಂದ ಹೋಮ, ಕಲಶಾಭಿಷೇಕ, ಅಂಕುರಪೂಜೆ, ರಾತ್ರಿ 8ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ.