ಕಾಸರಗೊಡು: ಜಿಲ್ಲೆಯ ಖಾಸಗಿ ಬಸ್‍ಗಳೂ ನಗದುರಹಿತ ಪ್ರಯಾಣಕ್ಕೆ ಸಜ್ಜಾಗುತ್ತಿದ್ದು, ಬಸ್‍ಗಳಲ್ಲಿ 'ಚಲೋ ಕಾರ್ಡ್'ವ್ಯವಸ್ಥೆ ಜಾರಿಗೆ ಬರಲಾರಂಭಿಸಿದೆ. ಕಾಸರಗೋಡು ಜಿಲ್ಲಾ ಖಾಸಗಿ ಬಸ್ ಮಾಲಿಕರ ಸಂಘದ ಸಹಯೋಗದೊಂದಿಗೆ ಚಲೋಕಾರ್ಡ್ ಅಭಿಯಾನ ಆರಂಭಗೊಂಡಿದೆ.
ಚಲೋ ಬಸ್ ಕಾರ್ಡ್ ಹೊಂದಿದಲ್ಲಿ ಜಿಲ್ಲೆಯ ಎಲ್ಲ ಖಾಸಗಿ ಬಸ್‍ಗಳಲ್ಲೂ ನಗದುರಹಿತ ಪ್ರಯಾಣ ನಡೆಸಬಹುದಾಗಿದೆ. ಎಟಿಎಂ ಕಾರ್ಡಿನಂತೆ ಚಲೋ ಕಾರ್ಡು ಲಭ್ಯವಾಗಲಿದ್ದು, ಇದನ್ನು ಆಯಾ ಬಸ್‍ಗಳ ನಿರ್ವಾಹಕರು 20ರೂ. ದರದಲ್ಲಿ ಪ್ರಯಾಣಿಕರಿಗೆ ಒದಗಿಸಲಿದ್ದಾರೆ. ಜತೆಗೆ ಹಣ ನೀಡಿದಲ್ಲಿ ಕನಿಷ್ಠ 50ರೂ. ಮೇಲ್ಪಟ್ಟು ರೀಚಾರ್ಜ್ ವ್ಯವಸ್ಥೆಯನ್ನೂ ಮಾಡಿಕೊಡಲಿದ್ದಾರೆ. ಮುಂದೆ ವಿವಿಧ ಮೊಬೈಲ್ ರೀಚಾರ್ಜ್ ಅಂಗಡಿಗಳಲ್ಲೂ ಇದರ ರೀಚಾರ್ಜ್ ವ್ಯವಸ್ಥೆ ನಡೆಯಲಿದೆ. ಪ್ರಯಾಣಿಕರು ಕಾರ್ಡನ್ನು ನಿರ್ವಾಹಕರಿಗೆ ನೀಡಿದಲ್ಲಿ, ತಮ್ಮ ಟಿಕೆಟ್ ಮೆಶಿನ್‍ಗೆ ಅಳವಡಿಸಿ, ಪ್ರಯಾಣದ ಸ್ಥಳದ ಸ್ಟೇಜ್ ಸಂಖ್ಯೆ ಬಟನ್ ಅದುಮಿದರೆ, ನಿಗದಿತ ದರದ ಟಿಕೆಟ್ ಹೊರಬರುತ್ತದೆ. ಇದೇ ರೀತಿ ಪ್ರತಿ ಪ್ರಯಾಣದ ಮಧ್ಯೆ ಕಾರ್ಡಿನಲ್ಲಿ ಹಣ ಕಡಿಮೆಯಾಗುತ್ತಾ ಬರುತ್ತದೆ. ನಂತರ ರೀಚಾರ್ಜ್ ನಡೆಸಿಕೊಳ್ಳಬೇಕಾಗುತ್ತದೆ. ರೀಚಾರ್ಜ್ ಮಾಡಿದ ಚಲೋಕಾರ್ಡಿನಲ್ಲಿರುವ ಬಾಕಿ ಮೊತ್ತ ಪ್ರತಿ ಪ್ರಯಾಣದ ನಂತರ ಲಭಿಸುವ ಟಿಕೆಟ್‍ನಲ್ಲಿ ನಮೂದಾಗಿರುತ್ತದೆ. ಕಾರ್ಡು ಬಳಸಿ ಖಾಸಗಿ ಬಸ್‍ಗಳಲ್ಲಿ ಯಾವುದೇ ರೂಟಲ್ಲೂ ಸಂಚರಿಸಬಹುದಾಗಿದೆ. ಕಾರ್ಡು ಹೊಂದಿದವರಿಗೆ ನಗದುರಹಿತ ಪ್ರಯಾಣದ ವ್ಯವಸ್ಥೆಯಿದ್ದರೆ, ಹಣ ನೀಡಿ ಪ್ರಯಾಣಿಸುವವರಿಗೂ ಸಹಕಾರಿಯಾಗುವ ರೀತಿಯಲ್ಲಿ ನಿರ್ವಾಹಕರಲ್ಲಿ ಸುಧಾರಿತ ಟಿಕೆಟ್ ಮೆಶಿನ್ ಹೊಂದಿದೆ.