ಕಾಸರಗೋಡು: ಚಿನ್ಮಯ ವಿದ್ಯಾಲಯ ವಿದ್ಯಾನಗರದಲ್ಲಿ ಸ್ವಾಮಿ ವಿವೇಕಾನಂದ ಅವರ ಜನ್ಮ ದಿನವನ್ನು 'ರಾಷ್ಟ್ರೀಯ ಯುವ ದಿನ ' ವನ್ನಾಗಿ ಬುಧವಾರ ಆಚರಿಸಲಾಯಿತು. ಚಿನ್ಮಯ ಮಿಷನ್ ಒಟ್ಟಪ್ಪಾಲಂ ನ ಬೃಹ್ಮಚಾರಿ ಮುಕುಂದ ಚೈತನ್ಯ ಅವರು ಸ್ವಾಮಿ ವಿವೇಕಾನಂದರ ಜೀವನ ಹಾಗೂ ಆದರ್ಶದ ಬಗ್ಗೆ ಮಾಹಿತಿ ನೀಡಿ, ಮನುಷ್ಯ ಕುಲಕ್ಕೆ ಅನಿವಾರ್ಯವಾದ ಮೂರು ಪ್ರಧಾನ ಗುಣಗಳಾದ ಸತ್ಯ, ಧರ್ಮ ಹಾಗೂ ಅಹಿಂಸೆಯನ್ನು ಪಾಲಿಸಿಕೊಂಡು ಬರುವವರ ಜೀವನ ಪರಿಪೂರ್ಣವೆನ್ನಿಸುತ್ತದೆ ಎಂದು ತಿಳಿಸಿದರು.
ಕನ್ಯಾಕುಮಾರಿಯ ಬಂಡೆಯಮೇಲೆ ಕುಳಿತು ಸುದೀರ್ಘ ಕಾಲ ಧ್ಯಾನಾಸಕ್ತರಾದ ವಿವೇಕಾನಂದರು ಭಾರತದ ಹಿರಿಮೆ ಹಾಗೂ ಜ್ಞಾನವನ್ನು ಪ್ರಪಂಚದಾದ್ಯಂತ ಪಸರಿಸುವ ಅಚಲ ನಿರ್ಧಾರವನ್ನು ಕೈಗೊಂಡು ಯುವ ಜನತೆಯನ್ನೂ ಈ ನಿಟ್ಟಿನಲ್ಲಿ ಉದ್ದೀಪಿಸಿದರು. ಇವರ ಆದರ್ಶ ಜೀವನ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.