ಮಧೂರು: ವಿದುಷಿ ಉಷಾ ಈಶ್ವರ ಭಟ್ ಕಾಸರಗೋಡು ಇವರ ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ ಬೆಳ್ಳಿಹಬ್ಬ ಕಾರ್ಯಕ್ರಮವು ಶನಿವಾರ ಹಾಗೂ ಭಾನುವಾರ ಕಾಸರಗೋಡು ಬೀರಂತಬೈಲಿನಲ್ಲಿರುವ ಲಲಿತ ಕಲಾ ಸದನದಲ್ಲಿ ನಡೆಯಿತು.
ಶನಿವಾರ ಅಪರಾಹ್ನ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯ ಮೃದಂಗವಾದಕ ವಿದ್ವಾನ್ ಎನ್. ಹರಿ ದೀಪ ಬೆಳಗಿಸಿ ಚಾಲನೆ ನೀಡಿದರು. ಅವರು ಈ ಸಂದರ್ಭ ಮಾತನಾಡಿ, ಸಂಗೀತ ಕಲೋಪಾಸನೆಯ ಮೂಲಕ ಸುಧೀರ್ಘ ಕಾಲದಿಂದ ಮುನ್ನಡೆಯುತ್ತಿರುವ ಬಂದಿರುವ ಗೋಪಾಲಕೃಷ್ಣ ಸಂಗೀತ ಶಾಲೆ ಕಾಸರಗೋಡಿನ ಸಂಗೀತ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಮಹತ್ತರವಾದುದು. ಯುವ ತಲೆಮಾರಿಗೆ ಕಲೆ, ಕಲಾಭಿವ್ಯಕ್ತಿಗೆ ಅವಕಾಶ ಮಾಡಿಕೊಡುವ ಶ್ರಮ ತಪಸ್ಸಿನಷ್ಟು ಗಟ್ಟಿಯಾಗಿ ಭವ್ಯ ಶ್ರೀಮಂತಕೆಯನ್ನು ತಂದುಕೊಟ್ಟಿದೆ ಎಂದು ತಿಳಿಸಿದರು.
ವಿದ್ವಾನ್ ವೆಳ್ಳಿಕ್ಕೋತ್ ವಿಷ್ಣು ಭಟ್ ಹಾಗೂ ವಿದ್ವಾನ್ ಅಜಿತ್ ನಂಬೂದಿರಿ ತಿರುವನಂತಪುರಂ ಮುಖ್ಯ ಅತಿಥಿಗಳಾಗಿ ಉಪಸ್ಥಿರಿದ್ದು ಮಾತನಾಡಿದರು. ಉಷಾ ಈಶ್ವರ ಭಟ್ ಉಪಸ್ಥಿತರಿದ್ದರು.
ಬಳಿಕ ವಿದ್ಯಾರ್ಥಿಗಳಿಂದ ಸಂಗೀತೋಪಾಸನಾ ನಡೆಯಿತು. ಅಪರಾಹ್ನ 4.30ರಿಂದ ವಿದುಷಿ ಎನ್.ಜೆ.ನಂದಿನಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಪ್ರಸ್ತುತಿಗೊಂಡಿತು. ವಯಲಿನ್‍ನಲ್ಲಿ ವಿದ್ವಾನ್ ವಿವೇಕ್ ರಾಜಾ ಕೆ.ಸಿ., ಮೃದಂಗದಲ್ಲಿ ವಿದ್ವಾನ್ ಎನ್.ಹರಿ, ಘಟಂನಲ್ಲಿ ವಿದ್ವಾನ್ ಕೋವೈ ಜಿ.ಸುರೇಶ್ ಸಾಥ್ ನೀಡಿದರು. ವಿದ್ವಾನ್ ಈಶ್ವರ ಭಟ್ ಸ್ವಾಗತಿಸಿ, ನಿರೂಪಿಸಿದರು.
ಭಾನುವಾರ ಬೆಳಗ್ಗೆ 9.30ರಿಂದ ವಿದ್ಯಾರ್ಥಿಗಳಿಂದ ಸಂಗೀತೋಪಾಸನೆ ನಡೆಯಿತು. ವಿದ್ವಾನ್ ಪ್ರಭಾಕರ ಕುಂಜಾರು, ವಿದ್ವಾನ್ ಬಾಲರಾಜ್ ಬೆದ್ರಡಿ, ಡಾ. ಮಾಯಾ ಮಲ್ಯ, ವಿದ್ವಾನ್ ರಾಜೀವ್ ಗೋಪಾಲ್ ವೆಳ್ಳಿಕೋತ್, ವಿದ್ವಾನ್ ಕಣ್ಣನ್ ಕಾಞಂಗಾಡು, ವಿದ್ವಾನ್ ಶ್ರೀಧರ ಭಟ್ ಬಡಕ್ಕೇಕರೆ, ವಿದ್ವಾನ್ ಟಿ.ಕೆ.ವಾಸುದೇವ ಕಾಞಂಗಾಡು ಸಹಕರಿಸಿದರು. ಅಪರಾಹ್ನ ಗೌರವಾರ್ಪಣೆ, ಪ್ರಧಾನ ಸಂಗೀತ ಕಚೇರಿ ನಡೆಯಿತು.