ಬೆಂಗಳೂರು: ಚಂದ್ರಯಾನ-2 ಮಿಷನ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟಾಪ್ ರಾಕೆಟ್ ವಿಜ್ಞಾನಿ ಎಸ್ ಸೋಮನಾಥ್ ಅವರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ)ನೂತನ ಮುಖ್ಯಸ್ಥ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಪ್ರಸ್ತುತ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ(ವಿಎಸ್‌ಎಸ್‌ಸಿ) ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಎಸ್ ಸೋಮನಾಥ್ ಅವರು, ಇಸ್ರೋದ 11ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಸಂಪುಟ ಕಾರ್ಯದರ್ಶಿ ನೇಮಕಾತಿ ಸಮಿತಿಯು ಬುಧವಾರ ಹೊರಡಿಸಿದ ನೇಮಕಾತಿ ಆದೇಶದಲ್ಲಿ, ಎಸ್ ಸೋಮನಾಥ್ ಅವರನ್ನು ಮೂರು ವರ್ಷಗಳ ಸಂಯೋಜಿತ ಅವಧಿಗೆ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಹಾಲಿ ಇಸ್ರೋ ಮುಖ್ಯಸ್ಥ ಕೆ ಶಿವನ್ ಅವರ ಸ್ಥಾನಕ್ಕೆ ಸೋಮನಾಥ್ ಅವರು ನೇಮಕಗೊಂಡಿದ್ದಾರೆ, ಶಿವನ್ ಅವರ ಅಧಿಕಾರಾವಧಿ ಜನವರಿ 14,2022 ರಂದು ಕೊನೆಗೊಳ್ಳಲಿದೆ.
2018ರ ಕೆ ಶಿವನ್ ಅವರು ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ಸೋಮನಾಥ್ ವಿಎಸ್‌ಎಸ್‌ಸಿ ನಿರ್ದೇಶಕರ ಹುದ್ದೆ ವಹಿಸಿಕೊಂಡಿದ್ದರು. ಸೋಮನಾಥ್
ಚಂದ್ರಯಾನ-2 ಬಾಹ್ಯಾಕಾಶ ನೌಕೆ ಉಡಾವಣೆ ಮಾಡಲು ಆಯ್ಕೆ ಮಾಡಲಾದ ಉಡಾವಣಾ ವಾಹನದ ಮೊದಲ ಯೋಜನಾ ನಿರ್ದೇಶಕರಾಗಿದ್ದಾರೆ.
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ( IISc) ನ ಹಳೆಯ ವಿದ್ಯಾರ್ಥಿ ಸೋಮನಾಥ್, 1985 ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಗೆ ಸೇರಿದರು ಮತ್ತು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ಮತ್ತು ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (GSLG) ಯೋಜನೆಗಳಲ್ಲಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ.