ಹರಿದ್ವಾರ: ಇತ್ತೀಚಿನ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ ನಲ್ಲಿ ಅಲ್ಪಸಂಖ್ಯಾತ ಸಮುದಾಯ ವಿರುದ್ಧ ದ್ವೇಷಪೂರಿತ ಭಾಷಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್ ಐಆರ್ ಗೆ ಇದೀಗ ಯತಿ ನರಸಿಂಹಾನಂದ್ ಮತ್ತು ಸಿಂಧು ಸಾಗರ್ ಅವರುಗಳ ಹೆಸರನ್ನೂ ಸೇರಿಸಲಾಗಿದೆ.
ಎಫ್ ಐಆರ್ ನಲ್ಲಿ ಎರಡು ಹೊಸ ಹೆಸರುಗಳು ಸೇರ್ಪಡೆಗೊಂಡಿದ್ದು, ಇದುವರೆಗೆ ಪ್ರಕರಣದಲ್ಲಿ ಐದು ಮಂದಿಯನ್ನು ದಾಖಲಿಸಲಾಗಿದೆ. ಇವರಲ್ಲಿ ವಾಸಿಂ ರಿಜ್ವಿ ಅಲಿಯಾಸ್ ಜೀತೇಂದ್ರ ತ್ಯಾಗಿ, ಸಾದ್ವಿ ಅನ್ನಪೂರ್ಣ, ಧರ್ಮದಾಸ್, ಯೇತಿ ನರಸಿಂಹಾನಂದ್ ಮತ್ತು ಸಿಂಧು ಸಾಗರ್ ಸೇರಿದ್ದಾರೆ.
ಘಾಜಿಯಾಬಾದ್ ನ ದಾಸ್ನಾ ದೇವಸ್ಥಾನದ ಅರ್ಚಕ ಯತಿ ನರಸಿಂಹಾನಂದ್ ಮತ್ತು ಸಂತ ಸಿಂಧು ಸಾಗರ್ ಅವರ ಹೆಸರನ್ನು ಕೂಡಾ ಎಫ್ ಐಆರ್ ಗೆ ಸೇರಿಸಲಾಗಿದೆ ಎಂದು ಹರಿದ್ವಾರದ ವೃತ್ತಾಧಿಕಾರಿ ಶೇಖರ್ ಸುಯಲ್ ಹೇಳಿದ್ದಾರೆ. ಆದಾಗ್ಯೂ, ಎಫ್ ಐಆರ್ ಗೆ ಹೊಸ ವಿಭಾಗವನ್ನು ಏಕೆ ಸೇರಿಸಲಾಗಿದೆ ಎಂಬುದನ್ನು ವಿವರಿಸಲು ಅಧಿಕಾರಿಗಳು ನಿರಾಕರಿದ್ದಾರೆ.
ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ ದ್ವೇಷ ಭಾಷಣದ ಪ್ರಕರಣದ ಬಗ್ಗೆ ತನಿಖೆ ನಡೆಸಲು ಎಸ್ ಪಿ ಮಟ್ಟದ ಅಧಿಕಾರಿ ನೇತೃತ್ವದಲ್ಲಿ ಐವರು ಸದಸ್ಯರ ಎಸ್ ಐಟಿ ರಚಿಸಲಾಗಿದೆ. ತಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಐಜಿ ಗರ್ವಾಲ್ ಕರಣ್ ಸಿಂಗ್ ನಾಗ್ನ್ಯಾಲ್ ಹೇಳಿದ್ದಾರೆ.
ಎಫ್ ಐಆರ್ , ಸೆಕ್ಷನ್ 153 ಎ( ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಆಧಾರದ ಮೇಲೆ ವಿವಿಧ ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು ಸೆ7ನ್ 295( ಆರಾಧನೆಯ ಸ್ಥಳ ಅಥವಾ ಯಾವುದೇ ಪವಿತ್ರ ವಸ್ತುವಿಗೆ ಹಾನಿಯನ್ನುಂಟು ಮಾಡುವುದು) ಭಾರತೀಯ ದಂಡನೆಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಲು ಬಿಜೆಪಿ ಹಿಂಜರಿಯುವುದಿಲ್ಲ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಕಾನೂನು ಸುವ್ಯವಸ್ಥೆ ರಾಜ್ಯದ ವಿಷಯವಾಗಿದೆ. ಬೇಜವಾಬ್ದಾರಿಯುತ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಸಾಕಷ್ಟು ಅಧಿಕಾರವಿದೆ ಎಂದಿದ್ದಾರೆ. ಡಿಸೆಂಬರ್ 16 ರಿಂದ 19ರವರೆಗೆ ಹರಿದ್ವಾರದ ವೇದ ನಿಕೇತನ ಧಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ದ್ವೇಷಪೂರಿತ ಭಾಷಣಗಳನ್ನು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಧರ್ಮ ಸಂಸದ್ ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.