ಕಾಸರಗೋಡು: ಮೊಗ್ರಾಲ್ ಪುತ್ತೂರು ಕೊಪ್ಪಳದಲ್ಲಿ ರೈಲ್ವೆ ಇಲಾಖೆ ಅಂಡರ್ ಪ್ಯಾಸೇಜ್ ನಿರ್ಮಾಣಕಾಮಗಾರಿ ಆರಂಭಿಸಿದ್ದು, ಈ ಪ್ರದೇಶದ ಜನತೆಯ ದೀರ್ಘ ಕಾಲದ ಬೇಡಿಕೆ ಈಡೇರುವ ಹಂತಕ್ಕೆ ತಲುಪಿದೆ. ಕೊಪ್ಪಳ ಅಂಡರ್ ಪ್ಯಾಸೇಜ್ ನಿರ್ಮಾಣಕ್ಕಾಗಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ 2.75ಕೋಟಿ ರೂ. ಮೀಸಲಿರಿಸಿ, ಈ ಮೊತ್ತವನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸುವ ಮೂಲಕ ಜಿಲ್ಲಾ ಪಂಚಾಯಿತಿಯ ಈ ಹಿಂದಿನ ಆಡಳಿತ ಕಾಮಗಾರಿಯ ಆರಂಭಕ್ಕೆ ಯೋಜನೆ ತಯಾರಿಸಿತ್ತು.
ಕೇಂದ್ರ ಸರ್ಕಾರದ ಅನುಮತಿ, ಟೆಂಡರ್ ಪ್ರಕ್ರಿಯೆ ಪೂರ್ತಿಗೊಳ್ಳುವುದರೊಂದಿಗೆ ಕಾಂಗಾರಿ ಆರಂಭಿಸಲಾಗಿದೆ. ಕೊಪ್ಪಳ ಪ್ರದೇಶದ ಜನತೆಗೆ ರೈಲು ಹಳಿ ದಾಟಿ ಹೋಗಬೇಕಾದರೆ, ಕಿಲೋಮೀಟರ್ ಸುತ್ತು ಬಳಸಿ ತೆರಳಬೇಕಾದ ಅನಿವಾರ್ಯತೆ ಇದರಿಂದ ದೂರಾಗಲಿದೆ.
2013ರಲ್ಲಿ ಕುಂಬಳೆ ಗ್ರಾಪಂ, ಯೋಜನೆಗೆ ಪ್ರಾಥಮಿಕ ಹಂತದಲ್ಲಿ ಸಿದ್ಧತೆ ಆರಂಭಿಸಿದ್ದು, ಅನಂತರ ಜಿಪಂ ಅಂದಿನ ಅಧ್ಯಕ್ಷ ಎ.ಜಿ.ಸಿ ಬಶೀರ್ ಯೋಜನೆ ಜಾರಿಗೆ ಹೆಚ್ಚಿನ ಶ್ರಮವಹಿಸಿದ್ದರು. ನಂತರ ಸಂಸದ ಪಿ.,ಕರುಣಾಕರನ್ ಅವರೂ ತಮ್ಮ ಸಂಸದರ ನಿಧಿಯಿಂದ ಹಣ ಮಂಜೂರುಗೊಳಿಸಿದ್ದಾರೆ.