ಕಾಸರಗೋಡು: ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರಕ್ಕೆ ತಯಾರಿ ನಡೆಸುವ ಮಧ್ಯೆ ವ್ಯಕ್ತಿಯಲ್ಲಿ ಉಸಿರಾಟ ಕಂಡುಬರಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಮತ್ತೆ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಕೆ ಕಂಡುಬರಲಾರಂಭಿಸಿದೆ.
ಬದಿಯಡ್ಕ ವಾಂತಿಚ್ಚಾಲ್ ನಿವಾಸಿ ಗುರುವ(60)ವೈದ್ಯರ ಎಡವಟ್ಟಿನಿಂದ ಪುನರ್ಜನ್ಮ ಪಡೆದ ವ್ಯಕ್ತಿ. ಕೂಲಿಕಾರ್ಮಿಕರಾಗಿರುವ ಗುರುವ ಅವರಿಗೆ ಅಸೌಖ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಮವಾರ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ವಿಭಾಗದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಂಗಳವಾರ ತಪಾಸಣೆ ನಡೆಸಿದ ವೈದ್ಯರು, ರೋಗಿ ಆಕ್ಸಿಜನ್ ಸಹಾಯದಿಂದ ಮಾತ್ರ ಉಸಿರಾಡುತ್ತಿದ್ದು, ಆಕ್ಸಿಜನ್ ತೆರವುಗೊಳಿಸಿದಲ್ಲಿ ಉಸಿರಾಟ ನಿಲ್ಲಿಸುವಸಾಧ್ಯತೆಯಿದ್ದು ತಕ್ಷಣ ಮನೆಗೆ ಕರೆದೊಯ್ಯುವಂತೆ ತಿಳಿಸಿದ್ದರು. ಸಂಬಂಧಿಕರು ತಕ್ಷಣ ಮನೆಯವರಿಗೆ ಮಾಹಿತಿ ನೀಡಿ, ಚಿತೆ ತಯಾರುಮಾಡುವಂತೆ ಸೂಚಿಸಿದ್ದರು. ಮನೆಯಲ್ಲಿ ಅಂತ್ಯಸಂಸ್ಕಾರದ ಸಿದ್ಧತೆ ನಡೆಯುತ್ತಿದ್ದರೆ, ಪ್ರಾಣಪಕ್ಷಿ ಹಾರಿಹೋಗಿರುವುದಾಗಿ ವೈದ್ಯರು ತಿಳಿಸಿದ್ದ ವ್ಯಕ್ತಿ ಇತ್ತ ಉಪ್ಪಳ ತಲುಪುತ್ತಿದ್ದಂತೆ ಆಂಬುಲೆನ್ಸ್‍ನಲ್ಲಿ ಉಸಿರಾಟ ಪುನರಾರಂಭಿಸಿದ್ದರು.
ಆಂಬುಲೆನ್ಸ್ ವಾಂತಿಚ್ಚಾಲಿನ ಮನೆಗೆ ತೆರಳದೆ, ನೇರ ಬದಿಯಡ್ಕದ ಖಾಸಗಿ ಕ್ಲಿನಿಕ್‍ಗೆ ತೆರಳಿ, ವೈದ್ಯರಿಂದ ತಪಾಸಣೆ ನಡೆಸಿದಾಗ ವ್ಯಕ್ತಿ ಜೀವಂತವಿರುವುದನ್ನು ಖಚಿತಪಡಿಸಿದ್ದರು. ತಕ್ಷಣ ರೋಗಿಯನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯ ತೀವ್ರನಿಗಾ ವಿಭಾಗಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾರಂಭಿಸಿದ್ದಾರೆ. ವ್ಯಕ್ತಿಯಲ್ಲಿ ಒಂದಷ್ಟು ಚೇತರಿಕೆ ಕಂಡಬರಲಾರಂಭಿಸಿರುವುದಾಗಿ ಸಂಬಂಧಿಕರು ತಿಳಿಸಿದ್ದಾರೆ.