ತಿರುವನಂತಪುರಂ: ಕೇರಳದ ಎರ್ಣಾಕುಳಂ ಜಿಲ್ಲೆಯ ಕುಂಬಲಂಗಿ ಗ್ರಾಮವು ದೇಶದ ಮೊದಲ ಸ್ಯಾನಿಟರಿ-ನ್ಯಾಪ್‍ಕಿನ್ ಮುಕ್ತ ಗ್ರಾಮವೆಂಬ ಹೆಗ್ಗಳಿಕೆ ಪಡೆದಿದೆ. ಈ ಕುರಿತಂತೆ ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಗುರುವಾರ ಘೋಷಣೆ ಮಾಡಿದ್ದಾರೆ.
ಅಷ್ಟಕ್ಕೂ ಈ ಗ್ರಾಮವು ಸ್ಯಾನಿಟರಿ-ನ್ಯಾಪ್‍ಕಿನ್ ಮುಕ್ತ ಹೇಗಾಯಿತು ಎಂಬುದಕ್ಕೆ ಇಲ್ಲಿದೆ ಮಾಹಿತಿ. ಇಲ್ಲಿನ ಅವಳ್ಕಾಯಿ (ಅವಳಿಗಾಗಿ) ಯೋಜನೆಯಡಿ ಗ್ರಾಮದ 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ 5,000 ಮೆನ್‍ಸ್ಟ್ರುವಲ್ ಕಪ್‍ಗಳನ್ನು ವಿತರಿಸಲಾಗಿದೆ. ಈ ಯೋಜನೆಯನ್ನು ಎರ್ಣಾಕುಳಂ ಸಂಸದೆ ಹಿಬಿ ಈಡನ್ ಅವರ ಮುತುವರ್ಜಿಯಿಂದ ಕೈಗೆತ್ತಿಕೊಳ್ಳಲಾಗಿದೆ. ಎಚ್‍ಎಲ್‍ಎಲ್ ಮ್ಯಾನೇಜ್ಮೆಂಟ್ ಅಕಾಡೆಮಿ ತನ್ನ ತಿಂಗಳ್ ಯೋಜನೆಯಡಿ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಯಾಗುತ್ತಿದೆ.
ಈ ಕಾರ್ಯಕ್ರಮದಂಗವಾಗಿ ಮಹಿಳೆಯರಿಗೆ ಮೆನ್‍ಸ್ಟ್ರುವಲ್ ಕಪ್‍ಗಳ ಬಳಕೆ ಹಾಗೂ ಅವುಗಳ ಪ್ರಯೋಜನಗಳ ಕುರಿತು ತರಬೇತಿ ನೀಡಲಾಗುತ್ತದೆ. ಈ ಕಪ್‍ಗಳು ಸ್ಯಾನಿಟರಿ ನ್ಯಾಪ್‍ಕಿನ್‍ಗಳ ಬಳಕೆ ಕಡಿಮೆಗೊಳಿಸಿ ಪರಿಸರ ಮಾಲಿನ್ಯವನ್ನೂ ಕಡಿಮೆಗೊಳಿಸುತ್ತದೆಯಲ್ಲದೆ ನೈರ್ಮಲ್ಯಕ್ಕೂ ಹೆಚ್ಚು ಒತ್ತು ನೀಡುತ್ತಿವೆ. ನಟಿ ಪಾರ್ವತಿ ಸಹಿತ ಕೆಲ ಸೆಲೆಬ್ರಿಟಿಗಳು ಈ ಯೋಜನೆಗೆ ಕೈಜೋಡಿಸಿದ್ದಾರೆ.
ಗ್ರಾಮದಲ್ಲಿ ಈ ಹಿಂದೆ ಸ್ಯಾನಿಟರಿ ನ್ಯಾಪ್‍ಕಿನ್ ವೆಂಡಿಂಗ್ ಮೆಶೀನುಗಳನ್ನು ಶಾಲೆಗಳಲ್ಲಿ ಅಳವಡಿಸಲಾಗಿತ್ತಾದರೂ ಅವುಗಳು ಹಲವು ಸಮಸ್ಯೆ ಸೃಷ್ಟಿಸುತ್ತಿದ್ದುದರಿಂದ ತಜ್ಞರ ಸಲಹೆ ಪಡೆದು ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಮೇಲಾಗಿ ಮೆನ್‍ಸ್ಟ್ರುವಲ್ ಕಪ್‍ಗಳನ್ನು ಹಲವು ವರ್ಷ ಮರುಬಳಕೆ ಮಾಡಬಹುದಾಗಿದೆ ಎಂದು ಸಂಸದೆ ಈಡನ್ ಹೇಳಿದ್ದಾರೆ.
ಮೆನ್‍ಸ್ಟ್ರುವಲ್ ಕಪ್‍ಗಳನ್ನು ಮೆಡಿಕಲ್ ಗ್ರೇಡ್ ಸಿಲಿಕಾನ್, ರಬ್ಬರ್ ಅಥವಾ ಪ್ಲಾಸ್ಟಿಕ್‍ನಿಂದ ತಯಾರಿಸಲಾಗುತ್ತದೆ ಹಾಗೂ ಮರುಬಳಕೆ ಮಾಡಬಹುದಾಗಿರುವುದರಿಂದ ಇದು ಎಲ್ಲರ ಕೈಗೆಟಕುತ್ತದೆ. ಅಷ್ಟೇ ಅಲ್ಲಿದೆ ಸ್ಯಾನಿಟರಿ ನ್ಯಾಪ್‍ಕಿನ್‍ಗಳಿಗೆ ಹೋಲಿಸಿದಾಗ ಇವುಗಳು ಪರಿಸರಸ್ನೇಹಿಯೂ ಆಗಿವೆ.