ನವದೆಹಲಿ: ಆಜಾದಿ ಕಾ ಅಮೃತ ಮಹೋತ್ಸವ ಭಾಗವಾಗಿ ದೇಶಾದ್ಯಂತ 30, 000 ಶಿಕ್ಷಣ ಸಂಸ್ಥೆಗಳ 3 ಲಕ್ಷ ವಿದ್ಯಾರ್ಥಿಗಳಿಗೆ ಸೂರ್ಯ ನಮಸ್ಕಾರ ಆಯೋಜಿಸುವಂತೆ ವಿಶ್ವ ವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಸುತ್ತೋಲೆ ಹೊರಡಿಸಿದೆ.
ಯುಜಿಸಿ ಹೊರಡಿಸಿರುವ ಸುತ್ತೋಲೆಗೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎ ಐ ಎಂ ಪಿ ಎಲ್ ಬಿ) ಆಕ್ರೋಶ ವ್ಯಕ್ತಪಡಿಸಿದೆ. ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಮುಸ್ಲಿಂ ವಿದ್ಯಾರ್ಥಿಗಳಿಗೆ ಅದು ಕರೆ ನೀಡಿದೆ. ಯುಜಿಸಿ ಡಿಸೆಂಬರ್ 29 ರಂದು ಹೊರಡಿಸಿದ ಸುತ್ತೋಲೆಯಲ್ಲಿ, ದೇಶದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ 75 ಕೋಟಿ ಸೂರ್ಯ ನಮಸ್ಕಾರ ಪೂರ್ಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಇದಕ್ಕಾಗಿ ಜನವರಿ 1 ರಿಂದ 7ರವರೆಗೆ ದೇಶಾದ್ಯಂತ 3 ಲಕ್ಷ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸುತ್ತೋಲೆ ವಿರೋಧಿಸಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕಾರ್ಯದರ್ಶಿ ಮೌಲಾನಾ ಖಲೀದ್ ರಹಮಾನಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಬಹುಸಂಖ್ಯಾತರ ಸಂಪ್ರದಾಯ, ಸಂಸ್ಖೃತಿಗಳನ್ನು ಇತರರ ಮೇಲೆ ಹೇರಲು ಸರ್ಕಾರ ನೋಡುತ್ತಿದೆ. ಇದು ರಾಜ್ಯಾಂಗ ವಿರೋಧಿ ಎಂದು ಅವರು ಆರೋಪಿಸಿದ್ದಾರೆ.