ನವದೆಹಲಿ: ಮಕ್ಕಳಿಲ್ಲದ ಹಾಗೂ ಉಯಿಲು ಬರೆಯದ ಹಿಂದೂ ಮಹಿಳೆ ಮರಣ ಹೊಂದಿದಾಗ, ಆಕೆ ಹೊಂದಿದ್ದ ಪೂರ್ವಾರ್ಜಿತ ಆಸ್ತಿ ಪಾಲಕರ ಅಥವಾ ಪತಿಯ ಉತ್ತರಾಧಿಕಾರಿಗಳಿಗೆ ಸೇರುತ್ತದೆ ಎಂದು ಸುಪ್ರೀಂಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ.
ನವದೆಹಲಿ: ಮಕ್ಕಳಿಲ್ಲದ ಹಾಗೂ ಉಯಿಲು ಬರೆಯದ ಹಿಂದೂ ಮಹಿಳೆ ಮರಣ ಹೊಂದಿದಾಗ, ಆಕೆ ಹೊಂದಿದ್ದ ಪೂರ್ವಾರ್ಜಿತ ಆಸ್ತಿ ಪಾಲಕರ ಅಥವಾ ಪತಿಯ ಉತ್ತರಾಧಿಕಾರಿಗಳಿಗೆ ಸೇರುತ್ತದೆ ಎಂದು ಸುಪ್ರೀಂಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಜೀರ್ ಹಾಗೂ ಕೃಷ್ಣ ಮುರಾರಿ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದ್ದು, ಹಿಂದೂ ಉತ್ತರಾಧಿಕಾರ ಕಾಯ್ದೆಯಲ್ಲಿನ ನಿಬಂಧನೆಗಳನ್ನು ವಿವರಿಸಿದೆ.
'ಮಕ್ಕಳು ಇಲ್ಲದ ಹಾಗೂ ಯಾವುದೇ ಉಯಿಲು ಮಾಡಿರದ ಹಿಂದೂ ಮಹಿಳೆ ಮೃತಪಟ್ಟಾಗ, ತಂದೆ ಅಥವಾ ತಾಯಿಯಿಂದ ಆಕೆ ಪಡೆದಿದ್ದ ಆಸ್ತಿ ಪಾಲಕರ ಉತ್ತರಾಧಿಕಾರಿಗಳಿಗೇ ಸೇರುತ್ತದೆ. ಒಂದು ವೇಳೆ, ಪತಿ ಅಥವಾ ಮಾವನಿಂದ ಆಸ್ತಿಯನ್ನು ಪಡೆದಿದ್ದರೆ, ಅಂಥ ಸ್ವತ್ತು ಪತಿಯ ಉತ್ತರಾಧಿಕಾರಿಗಳಿಗೆ ಹೋಗುತ್ತದೆ' ಎಂದು ನ್ಯಾಯಪೀಠ ಹೇಳಿದೆ.
ಆಸ್ತಿ ಹಕ್ಕುಗಳಿಗೆ ಸಂಬಂಧಿಸಿ ಪುರುಷ ಹಾಗೂ ಮಹಿಳೆಯರ ಮಧ್ಯೆ ಸಮಾನತೆ ಇರಬೇಕು ಎಂಬುದೇ ಈ ಕಾಯ್ದೆಯ ಮುಖ್ಯ ಉದ್ದೇಶ. ಪೂರ್ವಾರ್ಜಿತ ಆಸ್ತಿ ಮೇಲೆ ಮಹಿಳೆಯೂ ಸಂಪೂರ್ಣ ಹಕ್ಕು ಹೊಂದಿದ್ದಾಳೆ ಎಂಬುದನ್ನು ಈ ಕಾಯ್ದೆ ಸಾರುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಆಸ್ತಿ ಹಕ್ಕುಗಳಿಗೆ ಸಂಬಂಧಿಸಿ ಅರುಣಾಚಲ ಗೌಂಡರ್ ಎಂಬುವವರ ಉತ್ತರಾಧಿಕಾರಿಗಳು ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣಾ ನ್ಯಾಯಾಲಯ ಹಾಗೂ ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪುಗಳನ್ನು ರದ್ದುಗೊಳಿಸಿದ ನ್ಯಾಯಪೀಠ, 'ದುರದೃಷ್ಟವಶಾತ್, ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿರುವ ಅಂಶಗಳತ್ತ ಎರಡೂ ಕೋರ್ಟ್‌ಗಳು ಗಮನಹರಿಸಿಲ್ಲ' ಎಂದು ಅಭಿಪ್ರಾಯಪಟ್ಟಿತು.