ಚೆನ್ನೈ: ಇದೇ ಮೊದಲ ಬಾರಿಗೆ ದೃಷ್ಟಿಯಿಲ್ಲದ ವ್ಯಕ್ತಿಗೆ ಪ್ರಮುಖ ರಾಜಕೀಯ ಪಕ್ಷವನ್ನು ಜಿಲ್ಲಾ ಮಟ್ಟದಲ್ಲಿ ಮುನ್ನಡೆಸುವ ಅವಕಾಶ ಪ್ರಾಪ್ತವಾಗಿದೆ. ತಮಿಳುನಾಡಿನ ಚೆಂಗಲ್ ಪಟ್ಟುವಿನಲ್ಲಿ ಬಿ.ಎಸ್. ಭಾರತಿ ಅಣ್ಣ ಎಂಬುವವರನ್ನು ಸಿಪಿಎಂ ಪಕ್ಷದ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಈ ಸಂಬಂಧ ನಡೆದ ಮತದಾನ ಪ್ರಕ್ರಿಯೆಯಲ್ಲಿ ಭಾರತಿ ಅಣ್ಣ ಅವರು ಗೆಲುವು ಪಡೆದಿದ್ದಾರೆ.
ಬಿ.ಎಸ್.ಭಾರತಿ ಅಣ್ಣ ಅವರು ವೃತ್ತಿಯಲ್ಲಿ ವಕೀಲರಾಗಿದ್ದು ದಶಕಗಳಿಂದ ಕಮ್ಯುನಿಸ್ಟ್ ಸದಸ್ಯರಾಗಿದ್ದಾರೆ. ಕುರುಡುತನ ಅವರಿಗೆ ಹುಟ್ಟಿನಿಂದ ಬಂದಿಲ್ಲದಿದ್ದರೂ, ಅವರಿಗೆ ಹುಟ್ಟಿನಿಂದಲೂ ದೃಷ್ಟಿ ಸಮಸ್ಯೆಯಿತ್ತು. 2017ರಲ್ಲಿ ಅವರು ಸಂಪೂರ್ಣ ದೃಷ್ಟಿ ಕಳೆದುಕೊಂಡಿದ್ದರು.
ಪಕ್ಷದ ಸಾಧಾರಣ ಕಾರ್ಯಕರ್ತನಾಗಿದ್ದ ತಾವು ಈಗ ಉನ್ನತ ಸ್ಥಾನ ಅಲಂಕರಿಸಿರುವುದು ಸಮಾಜಕ್ಕೆ ದೊಡ್ಡ ಸಂದೇಶ ರವಾನಿಸುತ್ತದೆ. ಸಾಮಾಜಿಕವಾಗಿ ತುಳಿತಕ್ಕೊಳಗಾದ, ಅಂಧ ವ್ಯಕ್ತಿ ಇಂದು ನಾಯಕತ್ವ ಹುದ್ದೆಗೆ ಏರಿರುವುದು ಸಂತಸ ತಂದಿದೆ ಎಂದು ಭಾರತಿ ಅಣ್ಣ ಅವರು ಸಂತಸ ಹಂಚಿಕೊಂಡಿದ್ದಾರೆ.