ಕಾಸರಗೋಡು/ಬೆಂಗಳೂರು: ಗಡಿನಾಡು ಕಾಸರಗೋಡಿನ ಕನ್ನಡಿಗರಿಗೆ ಕೇರಳದ ವಿವಿದ ಇಲಾಖೆಗಳಲ್ಲಿ ಕನ್ನಡ ಭಾಷಾ ಭದ್ರತೆ ಒದಗಿಸುವ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಕೇರಳದ ಕನ್ನಡ ಭಾಷಾ ಅಲ್ಪಸಂಖ್ಯಾತರ ಬಗ್ಗೆ ಕೇರಳ ಸರ್ಕಾರದ ಆಡಳಿತ ಇಲಾಖೆ ತೆಗೆದುಕೊಂಡಿರುವ ಕನ್ನಡಿಗರ ಪರ ಸಕಾರಾತ್ಮಕ ಕ್ರಮಗಳ ಬಗ್ಗೆ ಪ್ರಾಧಿಕಾರ ಕೇರಳ ಸರ್ಕಾರಕ್ಕೆ ಪತ್ರ ಬರೆದಿತ್ತು. ಇದರ ಜತೆಗೆ ಕೇರಳ ಸರ್ಕಾರ ಕೇಂದ್ರದ ಅಲ್ಪಸಂಖ್ಯಾತ ಸಚಿವಾಲಯದ ಸಹಾಯಕ ಆಯುಕ್ತರಿಗೆ ಬರೆದ ಪತ್ರದ ಪ್ರತಿಯನ್ನು ಪ್ರಾಧಿಕಾರಕ್ಕೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದ್ದಾರೆ.
ಕೇರಳ ಸರ್ಕಾರ ಕೈಗೊಂಡಿರುವ ಕೆಲವೊಂದು ಕ್ರಮಗಳನ್ನು ಪ್ರಾಧಿಕಾರ ಪಟ್ಟಿಮಾಡಿದೆ. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಕನ್ನಡ ಭಾಷಿಗರಿಗೆ ನೆರವಾಗುವ ನಿಟ್ಟಿನಲ್ಲಿ ಕನ್ನಡ ಮತ್ತು ಮಲಯಾಳ ಬಲ್ಲ ಗುಮಾಸ್ತರನ್ನು ನೇಮಿಸಲಾಗಿದೆ. ಜಿಲ್ಲೆಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಕುಂದುಕೊರತೆ ನೋಡಿಕೊಳ್ಳಲು ಹೆಚ್ಚುವರಿ ಎಸ್‍ಪಿ ಹರೀಶ್ಚಂದ್ರ ನಾಯ್ಕ್ ಅವರನ್ನು ನೇಮಿಸಲಾಗಿದೆ. ಕನ್ನಡ ಮಾತನಾಡುವ ಭಾಷಾ ಅಲ್ಪಸಂಖ್ಯಾತರು ವಾಸಿಸುವ ಪ್ರದೇಶಗಳಲ್ಲಿನ ಪ್ರತಿ ಪೊಲೀಸ್ ಠಾಣೆಗೆ ಕನ್ನಡಭಾಷೆ ಬಲ್ಲ ಪೊಲೀಸ್ ಅಧಿಕಾರಿಯನ್ನು ನೇಮಿಸಲಾಗಿದೆ. ಪೊಲೀಸ್ ಠಾಣೆಗಳ ನಾಮಫಲಕವನ್ನು ಕನ್ನಡದಲ್ಲೂ ಬರೆಯಲಾಗಿದೆ. ಕಾಸರಗೋಡು ಮತ್ತು ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಹಾಗೂ ಕೇರಳದ ಎಲ್ಲ ಅಕ್ಷಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಕನ್ನಡದಲ್ಲಿ ದರಪಟ್ಟಿ ಪ್ರದರ್ಶಿಸಲು ನಿರ್ದೇಶ ನೀಡಲಾಗಿದೆ, ಇ-ಡಿಸ್ಟ್ರಿಕ್ಟ್ ಪೋರ್ಟಲ್‍ನಲ್ಲಿ ಕನ್ನಡ ಭಾಷೆಯನ್ನು ಸೇರಿಸುವ ಬಗ್ಗೆ ಕೇರಳ ರಾಜ್ಯದ ಐಟಿ ಮಿಷನ್ ನಿರ್ದೇಶಕರಿಗೆ ತಿಳಿಸಲಾಗಿದೆ. ಕಾಸರಗೋಡು ಜಿಲ್ಲೆಯ ಕರ್ನಾಟಕ ಗಡಿ ಭಾಗದಲ್ಲಿನ ಶಾಲೆಗಳಲ್ಲಿ ಕನ್ನಡ ಭಾಷೆಯಲ್ಲಿ ಪ್ರವೀಣರಾಗಿರುವ ಶಿಕ್ಷಕರ ಕೊರತೆಯ ಬಗ್ಗೆ ಅಲ್ಲಿನ ಜಿಲ್ಲಾಧಿಕಾರಿ ವರದಿ ಮಾಡಿದ್ದು, ಅಂತಹ ಶಾಲೆಗಳಲ್ಲಿ ಕನ್ನಡ ಬಾರದ ಶೀಕ್ಷಕರ ನೇಮಕಾಥಿಯನ್ನು ಕಟ್ಟುನಿಟ್ಟಾಗಿ ತಪ್ಪಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ವರದಿ ನೀಡಿದ್ದಾರೆ.
ಭಾಷಾ ಅಲ್ಪಸಂಖ್ಯಾತ ಪ್ರದೇಶದಲ್ಲಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ವಿದ್ಯಾರ್ಥಿಗಳಿಗೆ ತಮ್ಮ ಮಾತೃಭಾಷೆ ಕಲಿಯುವುದನ್ನು ನಿರ್ಬಂಧಿಸುವುದಿಲ್ಲ ಅಥವಾ ಮಲಯಾಳ ಕಲಿಯಲು ಒತ್ತಾಯಿಸುವುದಿಲ್ಲ. ಮಲಯಾಳ ಭಾಷಾ(ಕಡ್ಡಾಯ ಭಾಷೆ)ಮಸೂದೆ 2017 ಘೋಷಿಸುವ ಸರ್ಕಾರಿ ಆದೇಶ ಪ್ರಕಾರ ಭಾಷಾ ಅಲ್ಪಸಂಖ್ಯಾತ ಪ್ರದೇಶದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳ ಭಾಷೆಯನ್ನು ಕೂಡಾ ಕಲಿಸಲಗುತ್ತದೆ. ಚಿಕ್ಕ ವಯಸ್ಸಿನಲ್ಲೇ ಕನ್ನಡದ ಜತೆಗೆ ಮಲಯಾಳ ಕಲಿಯುವುದು ಭಾಷಾ ಅಲ್ಪ ಸಂಕ್ಯಾತ ವಿದ್ಯಾರ್ಥಿಗಳಿಗೆ ಕೇರಳ ಸರ್ಕಾರ ನಡೆಸುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಹಾಗೂ ಅವರ ಉದ್ಯೋಗಾವಕಾಶವನ್ನು ಸುಲಭಗೊಳಿಸಲು ಅನುಕೂಲವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿರುವುದಾಗಿ ಡಾ. ಸಿ.ಸೋಮಶೇಖರ್ ತಿಳಿಸಿದ್ದಾರೆ.