ಕೋಝಿಕ್ಕೋಡ್: ನಮ್ಮಲ್ಲಿ ವಧು ಪರೀಕ್ಷೆ ಸಾಮಾನ್ಯ ಸಂಪ್ರದಾಯ. ಹುಡುಗ ಮತ್ತು ಅವನ ಮನೆಯವರು ಹುಡುಗಿಯನ್ನು ಭೇಟಿ ಮಾಡಿ ಮಾತನಾಡುವುದು ಸಾಮಾನ್ಯ. ಆದರೆ ಇದೀಗ ಒಂದು ಗಂಟೆ ಕಾಲ ಹುಡುಗನ ಮನೆಯವರ ‘ವಿಚಾರಣೆ’ಯಿಂದ ಹುಡುಗಿ ಆಸ್ಪತ್ರೆ ಸೇರಬೇಕಾಯಿತು ಎಂಬ ಸುದ್ದಿ ಬಹಿರಂಗಗೊಂಡಿದೆ.
ಸ್ವಲ್ಪ ಅಸಾಮಾನ್ಯವೆನಿಸುವ ಘಟನೆ ಕೋಝಿಕ್ಕೋಡ್ ನಲ್ಲಿ ನಡೆದಿದೆ. ನಾದಪುರಂ ವಾಣಿಯಲ್ಲಿ ಈ ಘಟನೆ ನಡೆದಿದೆ. ಚಿಕ್ಕ ಕುಟುಂಬದ ವಿನಿತಾಳನ್ನು ನೋಡಲು ಬಂದ ಹುಡುಗನ ಕಡೆಯವರು ಮಾತನಾಡಿದ ನಂತರ ಹುಡುಗಿ ಅಸ್ವಸ್ಥಗೊಂಡಳು. ಇದಾದ ಬಳಿಕ ಎರಡು ಕುಟುಂಬಸ್ಥರ ನಡುವೆ ವಾಗ್ವಾದ ನಡೆದಿದ್ದು, ಪರಿಸ್ಥಿತಿ ಶಾಂತಗೊಳಿಸಲು ರಾಜಕಾರಣಿಗಳು ಮಧ್ಯಪ್ರವೇಶಿಸಬೇಕಾಯಿತು ಎಂದು ತಿಳಿದುಬಂದಿದೆ.
ಘಟನೆ ನಡೆದಿದ್ದು ಹೀಗೆ..
ಹುಡುಗ ಮತ್ತು ಆತನ ತಂಡದವರು ಬಂದು ಹುಡುಗಿಯನ್ನು ನೋಡಿ ಅವಳ ಬಗ್ಗೆ ಒಪ್ಪಿಗೆ ಸೂಚಿಸದ ಬಳಿಕ ಹುಡುಗನ ಕುಟುಂಬದ ಸುಮಾರು 25 ಮಹಿಳೆಯರ ಗುಂಪು ಹುಡುಗಿಯ ಮನೆಗೆ ಆಗಮಿಸಿತು. ಹುಡುಗಿಯನ್ನು ಭೇಟಿಯಾಗಲು, ಆ ಮಹಿಳಾ ಮಣಿಗಳು ಹುಡುಗಿಯನ್ನು ಕೋಣೆಯಲ್ಲಿ ಕೂಡಿ ಹಾಕಿದರು. ತದನಂತರ ಒಂದು ಗಂಟೆ ಚರ್ಚೆ ನಡೆಯಿತೆಂದು ಹೇಳಲಾಗಿದೆ. ಚರ್ಚೆಯ ಕೊನೆಯಲ್ಲಿ ಮಾನಸಿಕ ಮತ್ತು ದೈಹಿಕವಾಗಿ ದಣಿದಿದ್ದ ಹುಡುಗಿ ಅಸ್ವಸ್ಥಗೊಂಡಳು. ಕೊನೆಗೆ ಹುಡುಗಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಬಾಲಕಿ ಪದವಿ ವಿದ್ಯಾರ್ಥಿನಿ.
ಏತನ್ಮಧ್ಯೆ, ಮಹಿಳೆಯರ ಗುಂಪು ವಿಚಾರಣೆಯ ನಂತರ ಕೊಠಡಿಯಿಂದ ಹೊರಬಂದು ಬಾಲಕಿಯ ಮನೆಯವರು ನೀಡಿದ ಆಹಾರ ಬೋಜ್ಯಗಳನ್ನು ಸೇವಿಸಿ ಆನಂದಿಸಿದರು. ಹುಡುಗನ ಕುಟುಂಬ ವಿವಾಹಕ್ಕೆ ಒಪ್ಪಿಗೆಯನ್ನೂ ನೀಡಿತು. ಆದರೆ ವಿವಾಹದ ಬಗ್ಗೆ ಮರುಪರಿಶೀಲಿಸುವುದು ಹುಡುಗಿಯ ಕುಟುಂಬ ತಿಳಿಸಿದೆ. ಇದರೊಂದಿಗೆ ಪರಿಸ್ಥಿತಿ ಬಿಗಡಾಯಿಸಿತು.
ಮಗಳ ಅಸ್ವಸ್ಥತೆ ಹಾಗೂ ಹುಡುಗನ ಕುಟುಂಬದವರ ಹೇಳಿಕೆಯಿಂದ ಆಕ್ರೋಶಗೊಂಡ ಬಾಲಕಿಯ ತಂದೆ ಮನೆಯ ಗೇಟ್ ಬಂದ್ ಮಾಡಿದರು. ಹುಡುಗನ ಕುಟುಂಬದವರು ತೆರಳದಂತೆ ತಡೆ ನೀಡಲಾಯಿತು. ಮಹಿಳೆಯರು ಮತ್ತು ಪುರುಷರನ್ನು ದೀರ್ಘಕಾಲದವರೆಗೆ ನಿರ್ಬಂಧಿಸಲಾಗಿದೆ. ಅಂತಿಮವಾಗಿ ಸ್ಥಳೀಯರು ಮಧ್ಯಪ್ರವೇಶಿಸಿ ರಾಜಿ ನಡೆಸಿದರು. ಈ ವೇಳೆ ಕ್ಷೇತ್ರದ ರಾಜಕಾರಣಿಗಳಿಗೆ ಮಾಹಿತಿ ನೀಡಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಮೂಲಕ ಪರಿಸ್ಥಿತಿ ಶಾಂತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ವಿವಾಹ ಇನ್ನೂ ಅತಂತ್ರವಾಗಿದೆ ಎನ್ನುತ್ತಾರೆ ಸ್ಥಳೀಯರು.