ಕುಂಬಳೆ: ಆರಿಕ್ಕಾಡಿ ಒಡ್ಡಿನ ಬಾಗಿಲು ಸ್ಮಶಾನವನ್ನು ಪಂಚಾಯಿತಿ ಆಸ್ತಿಗೆ ಸೇರಿಸಿ ಸಾರ್ವಜನಿಕ ಸಮಾಧಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ರುದ್ರಭೂಮಿ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ಕುಂಬಳೆ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಿತು.
ಆರಿಕ್ಕಾಡಿ ಸ್ಮಶಾನವನ್ನು ಎಸ್‌ಸಿ, ಎಸ್‌ಟಿ ಸಮುದಾಯದವರು 1960 ರಿಂದ ಬಳಸುತ್ತಿದ್ದಾರೆ.
ಆದರೆ, ಆ ಭಾಗದ ಕೆಲವರು ಇದು ಸ್ಮಶಾನ ಭೂಮಿ ಅಲ್ಲ ಎಂದು ವಾದಿಸಿ, ಶವ ಸಂಸ್ಕಾರ, ದಹನ ಮಾಡುವುದಕ್ಕೆ ಅಡ್ಡಿಪಡಿಸುತ್ತಿರುವುದಾಗಿ ದೂರಲಾಗಿದೆ. ಇಲ್ಲಿಯ 80 ಸೆಂಟ್ಸ್ ಸ್ಥಳ ಸ್ಮಶಾನವಾಗಿರುವುದು ತಾಲೂಕು ದಾಖಲಾತಿಯಿಂದ ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಸಮಿತಿಯು ಜಿಲ್ಲಾಧಿಕಾರಿ, ಎಸ್‌ಸಿ, ಎಸ್ಟಿ ಮುಖ್ಯಸ್ಥರು ಹಾಗೂ ಪ್ರಧಾನಮಂತ್ರಿಗಳಿಗೆ ದೂರು ಸಲ್ಲಿಸಿದ್ದು, ದೂರಿನ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಕಚೇರಿ ಈಹಿಂದೆ ಗ್ರಾ.ಪಂ.ಗೆ ಸೂಚಿಸಿತ್ತು. ನಂತರ ಜಿಲ್ಲಾಧಿಕಾರಿಗಳು 2021ರ ಅಕ್ಟೋಬರ್‌ನಲ್ಲಿ ಸ್ಮಶಾನ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಂತೆ ಪಂಚಾಯಿತಿಗೆ ಸೂಚಿಸಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಪಂಚಾಯಿತಿಯ ಐದು ವಾರ್ಡ್ ಗಳ ಜನರು ಇದೇ ಸ್ಮಾಸನವನ್ನೇ ಬಳಸುತ್ತಿದ್ದಾರೆ. ಆರಿಕ್ಕಾಡಿ ಸ್ಮಶಾನಕ್ಕೆ ಎರಡು ವರ್ಷಗಳ ಹಿಂದೆಯೇ ಬ್ಲಾಕ್ ಪಂಚಾಯತ್ ವತಿಯಿಂದ ಶವ ಸಂಸ್ಕಾರದ ಸಲಕರಣೆಗಳನ್ನು ನೀಡಲಾಗಿತ್ತು. ಆದರೆ ಈ ಭಾಗದ ಕೆಲ ವ್ಯಕ್ತಿಗಳ ವಿರೋಧದಿಂದಾಗಿ ಬಳಕೆಯಾಗದೆ ನನೆಗುದಿಗೆ ಬೀಳುತ್ತಿದೆ.
ಸ್ಮಶಾನ ಭೂಮಿಯನ್ನು ಕೆಲವರು ಒತ್ತುವರಿ ಮಾಡಿಕೊಂಡು ಖಾಸಗಿ ಆಸ್ತಿಯಾಗಿಸಲು ಯತ್ನಿಸುತ್ತಿದ್ದಾರೆ ಎಂದು ಸಮಿತಿಯ ಪದಾಧಿಕಾರಿಗಳು ಆರೋಪಿಸಿದರು.
ಬಡ ಎಸ್‌ಸಿ, ಎಸ್‌ಟಿಯವರಿಗೆ ಅತ್ಯಂತ ಉಪಯುಕ್ತವಾಗಿರುವ ಸ್ಮಶಾನದಲ್ಲಿ ಶವ ಸಂಸ್ಕಾರಕ್ಕೆ ಸೌಲಭ್ಯವಿಲ್ಲದೇ ಕುಂಬಳೆಯಿಂದ ಕಳತ್ತೂರುವರೆಗಿನ ಹಲವು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲಾಧಿಕಾರಿಗಳ ಸೂಚನೆಯಂತೆ ಪಂಚಾಯಿತಿಯವರು ಮಧ್ಯ ಪ್ರವೇಶಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಪದಾಧಿಕಾರಿಗಳು ಆಗ್ರಹಿಸಿದರು.
ಪ್ರತಿಭಟನೆಯ ಭಾ ಗವಾಗಿ ಕುಂಬಳೆ ಪೇಟೆಯಿಂದ ಮೆರವಣಿಗೆ ಪಂಚಾಯತಿ ಕಚೇರಿಗೆ ನಡೆಸಲಾಯಿತು. ಮೊಗೇರ ಸಂಘದ ರಾಜ್ಯಾಧ್ಯಕ್ಷ ಐ.ಲಕ್ಷ್ಮಣ ಪ್ರತಿಭಟನೆ ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಸುರೇಶ್ ಮಂಗಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ರಾಮಪ್ಪ ಮಂಜೇಶ್ವರ, ಕೆ.ಕೆ.ಸ್ವಾಮಿಕೃಪಾ, ಉದಯ, ಪ್ರಭಾಕರ ಮೊದಲಾದವರು ನೇತೃತ್ವ ನೀಡಿದ್ದರು.