ಶ್ರೀನಗರ: ಜಮ್ಮು- ಕಾಶ್ಮೀರದ ನಾಲ್ವರು ಮಾಜಿ ಮುಖ್ಯಮಂತ್ರಿಗಳು ಹಾಗೂ ಇವರ ಕುಟುಂಬದ 15 ಮಂದಿಗೆ ಒದಗಿಸಲಾಗಿದ್ದ ವಿಶೇಷ ಭದ್ರತೆಯನ್ನು (ಎಸ್‌ಎಸ್‌ಜಿ) ಸರ್ಕಾರವು ವಾಪಸ್ ಪಡೆಯಲು ನಿರ್ಧರಿಸಿದೆ.
ಈ ಸಂಬಂಧ ಕಳೆದ ಡಿ.31ರಂದು ಕೇಂದ್ರ ಗೃಹ ಇಲಾಖೆಯು ಎಡಿಜಿಪಿ (ಭದ್ರತೆ) ಪತ್ರ ಬರೆದಿದ್ದು, ಮಾಜಿ ಮುಖ್ಯಮಂತ್ರಿಗಳಾದ ಎನ್‌ಸಿ ಪಕ್ಷದ ಫಾರೂಕ್ ಅಬ್ದುಲ್ಲಾ, ಅವರ ಪುತ್ರ ಒಮರ್ ಅಬ್ದುಲ್ಲಾ, ಪಿಡಿಪಿ ಮೆಹಬೂಬ ಮುಫ್ತಿ, ಕಾಂಗ್ರೆಸ್‌ನ ಗುಲಾಂ ನಬೀ ಅಜಾದ್ ಅವರಿಗೆ ನೀಡಲಾಗಿದ್ದ ಎಸ್‌ಎಸ್‌ಜಿ ಭದ್ರತೆಯನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದೆ.
2021ರ ಜುಲೈ 18 ಹಾಗೂ ಸೆ.21 ರಂದು ನಡೆದ ಭದ್ರತಾ ಸಮನ್ವಯ ಸಮಿತಿಯ ತೀರ್ಮಾನದಂತೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇನ್ನು ಮುಂದೆ ಈ ನಾಲ್ವರು ಮಾಜಿ ಮುಖ್ಯಮಂತ್ರಿಗಳು ಹಾಗೂ ಅವರ ಕುಟುಂಬ ಸದಸ್ಯರು ಎಸ್‌ಎಸ್‌ಜಿ ಭದ್ರತೆ ಹೊಂದಿರುವುದಿಲ್ಲ ಎಂದು ಹೇಳಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಎಸ್‌ಎಸ್‌ಜಿ ಸಿಬ್ಬಂದಿ ಕಡಿತಗೊಳಿಸುವಂತೆ ಸಲ್ಲಿಸಿದ್ದ ಪ್ರಸ್ತಾವವನ್ನು ಇಲಾಖೆಯು ಒಪ್ಪಿಕೊಂಡಿದ್ದು, ಸಾಧ್ಯವಾದಷ್ಟು ಸಿಬ್ಬಂದಿಯನ್ನು ಕಡಿತಗೊಳಿಸಿ, ಈ ಸಿಬ್ಬಂದಿಗಳ ನಿರ್ವಹಣೆಗಾಗಿ ಡಿಎಸ್‌ಪಿ ಕೇಡರ್‌ನ ಅಧಿಕಾರಿಯೊಬ್ಬರನ್ನು ನೇಮಿಸಬೇಕು. ಎಸ್‌ಎಸ್‌ಜಿಯಲ್ಲಿದ್ದ ಸಿಬ್ಬಂದಿಯನ್ನು ವಿವಿಧ ವಿಭಾಗಕ್ಕೆ ವರ್ಗಾವಣೆ ಮಾಡುವಂತೆ ಗೃಹ ಇಲಾಖೆಯು ನಿರ್ದೇಶನ ನೀಡಿದೆ.
ಜಮ್ಮು -ಕಾಶ್ಮೀರ ವಿಶೇಷ ಭದ್ರತಾ ಪಡೆ -2000 ಈ ಕಾಯ್ದೆಗೆ 2020ರ ಮಾರ್ಚ್ 31ರಂದು ತಿದ್ದುಪಡಿ ತರಲಾಗಿದ್ದು, ಈ ಕಾಯ್ದೆ ಅನ್ವಯ ಹಾಲಿ ಮುಖ್ಯಮಂತ್ರಿಗೆ ಮಾತ್ರ ಎಸ್‌ಎಸ್‌ಜಿ ಭದ್ರತೆ ಪಡೆಯಲಿದ್ದಾರೆ.
ಮಾಜಿ ಮುಖ್ಯಮಂತ್ರಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಭದ್ರತೆ ಒದಗಿಸುವ 'ಜಮ್ಮು ಮತ್ತು ಕಾಶ್ಮೀರ ವಿಶೇಷ ಭದ್ರತಾ ಪಡೆ-2000'ಕಾಯ್ದೆಯನ್ನು 2000ರಲ್ಲಿ ಅಂದಿನ ಸಿಎಂ ಫಾರೂಕ್ ಅಬ್ದುಲ್ಲಾ ನೇತೃತ್ವದ ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ತಂದಿತ್ತು.