ಲಖನೌ: ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಪ್ರಮುಖ ಸವಾಲಾಗಿ ಹೊರಹೊಮ್ಮಿರುವ ಸಮಾಜವಾದಿ ಪಕ್ಷ(ಎಸ್‌ಪಿ) ಕೆಲವು ಉನ್ನತ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಕೋರಿ ಕೇಂದ್ರ ಚುನಾವಣಾ ಆಯೋಗಕ್ಕೆ ಭಾನುವಾರ ಪತ್ರ ಬರೆದಿದೆ.
ಉನ್ನತ ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರಂತೆ ಹೆಚ್ಚು ಕಾರ್ಯ ನಿರ್ವಹಿಸುತ್ತಿದ್ದಾರೆ ಮತ್ತು ಉತ್ತರ ಪ್ರದೇಶದ ಆಡಳಿತಕ್ಕೆ ತುಂಬಾ ಹತ್ತಿರವಾಗಿದ್ದಾರೆ ಎಂದು ಆರೋಪಿಸಿರುವ ಸಮಾಜವಾದಿ ಪಕ್ಷ, ನ್ಯಾಯಸಮ್ಮತ ಚುನಾವಣೆಗಾಗಿ ಅವರನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿದೆ.
ಉತ್ತರ ಪ್ರದೇಶದ ಪ್ರಮುಖ ವಿರೋಧ ಪಕ್ಷವಾದ ಸಮಾಜವಾದಿ ಪಕ್ಷ, ಹೆಚ್ಚುವರಿ ಮುಖ್ಯ ಗೃಹ ಕಾರ್ಯದರ್ಶಿ ಅವನೀಶ್ ಅವಸ್ತಿ, ಡಿಐಪಿಆರ್ ನವನೀತ್ ಸೆಹಗಲ್, ಯುಪಿ ಎಡಿಜಿ(ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಮತ್ತು ಹೆಚ್ಚುವರಿ ಮಹಾನಿರ್ದೇಶಕ ಮತ್ತು ಯುಪಿ ಎಸ್‌ಟಿಎಫ್ ಮುಖ್ಯಸ್ಥ ಅಮಿತಾಭ್ ಯಶ್ ಅವರನ್ನು ಗುರಿಯಾಗಿಸಿಕೊಂಡು ಈ ಪತ್ರ ಬರೆದಿದೆ.
ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ರಾಜೇಂದ್ರ ಚೌಧರಿ ಅವರು ಸಹಿ ಮಾಡಿರುವ ಪತ್ರದ ಮೂಲಕ, ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಖಚಿತಪಡಿಸಿಕೊಳ್ಳಲು ಈ ಉನ್ನತ ಅಧಿಕಾರಿಗಳನ್ನು ತಕ್ಷಣ ವರ್ಗಾವಣೆ ಮಾಡುವಂತೆ ಕೋರಿದೆ.
ಕೇಂದ್ರ ಚುನಾವಣಾ ಆಯೋಗವು ಜನವರಿ 8 ರಂದು ಉತ್ತರ ಪ್ರದೇಶ, ಗೋವಾ, ಮಣಿಪುರ, ಪಂಜಾಬ್ ಮತ್ತು ಉತ್ತರಾಖಂಡ ವಿಧಾನಸಭೆಗಳಿಗೆ ಚುನಾವಣೆಯ ವೇಳಾಪಟ್ಟಿ ಪ್ರಕಟಿಸಿದ್ದು, ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ನಂತರ, ಪ್ರಮುಖ ಪ್ರತಿಪಕ್ಷವು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.