ಮಕ್ಕಳ ಪಾಲನೆಯ ಹೊಣೆಯನ್ನು ನಿರ್ಧರಿಸುವಾಗ ಹೆತ್ತವರ ಹಕ್ಕುಗಳು ಅಪ್ರಸ್ತುತವಾಗುತ್ತವೆ ಮತ್ತು ಇಂತಹ ಸಂದರ್ಭಗಳಲ್ಲಿ ಮಗುವಿನ ಹಿತಚಿಂತನೆಯು ಅತ್ಯಂತ ಮುಖ್ಯವಾಗಿರುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.
ಬುಧವಾರ ವಿಚಾರಣೆ ಸಂದರ್ಭ ನ್ಯಾಯಮೂರ್ತಿಗಳಾದ ಅಜಯ ರಸ್ತೋಗಿ ಮತ್ತು ಎ.ಎಸ್.ಓಕಾ ಅವರ ಪೀಠವು,ಅಪ್ರಾಪ್ತ ವಯಸ್ಕ ಮಗು ಯಾರ ಬಳಿಯಲ್ಲಿರಬೇಕು ಎನ್ನುವುದನ್ನು ಮತ್ತು ಮಗು ತನ್ನ ತವರು ದೇಶಕ್ಕೆ ಮರಳುವ ವಿಚಾರವನ್ನು ಅದರ ಹಿತಚಿಂತನೆಯ ಮಾನದಂಡದಲ್ಲಿ ಮಾತ್ರ ನಿರ್ಧರಿಸಬಹುದೇ ಹೊರತು ಹೆತ್ತವರ ಕಾನೂನು ಹಕ್ಕುಗಳ ಆಧಾರದಲ್ಲಿ ಅಲ್ಲ ಎಂದು ಸ್ಪಷ್ಟಪಡಿಸಿತು.
ತನ್ನ ಅಪ್ರಾಪ್ತ ವಯಸ್ಕ ಮಗುವಿನ ಪಾಲನೆಯ ಹೊಣೆಯನ್ನು ಅಮೆರಿಕದ ಪ್ರಜೆಯಾಗಿರುವ ತಂದೆಗೆ ಒಪ್ಪಿಸಿರುವ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ತಾಯಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ಮಗುವಿನೊಂದಿಗೆ ಅಮೆರಿಕಕ್ಕೆ ಮರಳುವಂತೆ ಉಚ್ಚ ನ್ಯಾಯಾಲಯವು ತಾಯಿಗೆ ನಿರ್ದೇಶ ನೀಡಿದ್ದು,ಇದನ್ನು ಆಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.
ಮಗುವಿನ ಮೂತ್ರಪಿಂಡ ಊತದ ಚಿಕಿತ್ಸೆಗಾಗಿ ತಾಯಿ ಅದನ್ನು ಭಾರತಕ್ಕೆ ಕರೆತಂದಿದ್ದರು. ಚಿಕಿತ್ಸೆಯ ಬಳಿಕ ತಾನು ಮಗುವಿನೊಂದಿಗೆ ಅಮೆರಿಕಕ್ಕೆ ಮರಳುವುದಾಗಿ ಒಪ್ಪಿಗೆ ಪತ್ರಕ್ಕೆ ಆಕೆ 2019,ಸೆ.26ರಂದು ಸಹಿ ಹಾಕಿದ್ದರು. ಈ ಪತ್ರದಂತೆ ಯೋಜನೆಯಲ್ಲಿ ಯಾವುದೇ ಬದಲಾವಣೆಯು ಹೆತ್ತವರ ಸಮ್ಮತಿಗೊಳಪಟ್ಟಿದೆ.
ಆದರೆ ಚಿಕಿತ್ಸೆ ಪೂರ್ಣಗೊಂಡ ಬಳಿಕ ಮಗುವನ್ನು ಅಮೆರಿಕಕ್ಕೆ ಮರಳಲು ತಾಯಿ ಅವಕಾಶ ನೀಡಿರಲಿಲ್ಲ.
ವೈದ್ಯಕೀಯ ಚಿಕಿತ್ಸೆಯಿಂದಾಗಿ ಮಗುವನ್ನು ಅಮೆರಿಕಕ್ಕೆ ಕರೆದೊಯ್ಯುವುದು ಕಾರ್ಯಸಾಧ್ಯವಲ್ಲ ಎಂದು ಆಕೆ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದರು.
ಬಳಿಕ ಮಗುವಿನ ತಂದೆ ಅದನ್ನು ತನ್ನ ಪಾಲನೆಗೆ ಒಪ್ಪಿಸುವಂತೆ ಕೋರಿ ಅಮೆರಿಕದ ಅರ್ಕಾನ್ಸಸ್‌ನ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು. ತನ್ನ ಮಗುವನ್ನು ದೇಶದ ಹೊರಗೆ ಅಕ್ರಮವಾಗಿ ದಿಗ್ಬಂಧನದಲ್ಲಿರಿಸಲಾಗಿದೆ ಎಂದು ಅವರು ಆರೋಪಿಸಿದ್ದರು. ಅನುಸರಣಾ ಚಿಕಿತ್ಸೆಗಾಗಿ ಭಾರತದಲ್ಲಿ ತನ್ನ ವಾಸ್ತವ್ಯಕ್ಕೆ ಯಾವುದೇ ಸಮರ್ಥನೀಯ ಕಾರಣಗಳನ್ನು ಅರ್ಜಿದಾರರು (ಮಗುವಿನ ತಾಯಿ) ನೀಡಿಲ್ಲ ಎಂದು ಅವರು ತಿಳಿಸಿದ್ದರು.
ಅಪ್ರಾಪ್ತ ವಯಸ್ಕ ಮಗುವನ್ನು ಚಿಕಿತ್ಸೆಗಾಗಿ ಭಾರತದಲ್ಲಿ ಇಟ್ಟುಕೊಳ್ಳಲು ಯಾವುದೇ ಪುರಾವೆಗಳಿಲ್ಲ ಎಂದು ಭಾರತದಲ್ಲಿ ವಿಚಾರಣೆ ಸಂದರ್ಭ ತಿಳಿಸಿದ ಸರ್ವೋಚ್ಚ ನ್ಯಾಯಾಲಯವು,ಮಗುವು ಅಮೆರಿಕಕ್ಕೆ ಮರಳುವುದು ಅದರ ಹಿತಾಸಕ್ತಿ ಮತ್ತು ಹಿತಚಿಂತನೆಗೆ ಅನುಗುಣವಾಗಿದೆ ಎಂಬ ನಿರ್ಧಾರಕ್ಕೆ ಬರಲು ಕಾರಣಗಳನ್ನು ಉಚ್ಚ ನ್ಯಾಯಾಲಯವು ನೀಡಿದೆ. ಉಚ್ಚ ನ್ಯಾಯಾಲಯವು ಅಮೆರಿಕದ ನ್ಯಾಯಾಲಯದ ಆದೇಶವನ್ನು ನಿರ್ಣಾಯಕ ಎಂದು ಪರಿಗಣಿಸಿಲ್ಲ. ಉಚ್ಚ ನ್ಯಾಯಾಲಯವು ತನ್ನ ಅಧಿಕಾರ ಚಲಾಯಿಸಿರುವುದನ್ನು ವಿಕೃತ ಅಥವಾ ಕಾನೂನುಬಾಹಿರ ಎಂದು ಹೇಳುವಂತಿಲ್ಲ ಎಂದು ಹೇಳಿತು. ಹೆತ್ತವರು ಎಲ್ಲಿ ವಾಸವಾಗುತ್ತಾರೆ ಎಂದು ತಾನು ಅವರನ್ನು ಕೇಳುವುದಿಲ್ಲ,ಏಕೆಂದರೆ ಅದು ಅವರ ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತದೆ. ಮಗುವಿನ ಹಿತಚಂತನೆಯನ್ನು ಖಚಿತಪಡಿಸುವಂತೆ ತಾನು ಅವರನ್ನು ಆದೇಶಿಸಬಹುದು ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿತು.