ನವದೆಹಲಿ: ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ ಮಿರಾಮ್ ಟ್ಯಾರೋನ್ ನನ್ನು ಚೀನಾ ಸೇನೆ ಭಾರತೀಯ ಸೇನೆಗೆ ಹಸ್ತಾಂತರಿಸಿದೆ.
ಯುವಕನ ಹಸ್ತಾಂತರ ಕುರಿತಂತೆ ಕೇಂದ್ರ ಸಚಿವ ಕಿರಣ್ ರಿಜಿಜು ಈ ಮಾಹಿತಿ ನೀಡಿದ್ದಾರೆ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಅರುಣಾಚಲ ಪ್ರದೇಶದ ಯುವಕ ಮಿರಾಮ್ ಟ್ಯಾರೋನ್ ಅವರನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ವೈದ್ಯಕೀಯ ಪರೀಕ್ಷೆ ಸೇರಿದಂತೆ ಸೂಕ್ತ ಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಭಾರತೀಯ ಸೇನೆಯು ಹಾಟ್‌ಲೈನ್‌ನಲ್ಲಿ ಚೀನಾ ಸೇನೆ ಜೊತೆಗೆ ಮಾತನಾಡಿದ್ದು, ಮಿರಾಮ್ ಟ್ಯಾರನ್ ಅವರನ್ನು ಶೀಘ್ರದಲ್ಲೇ ವಾಪಸ್ ಕಳುಹಿಸುವಂತೆ ಕೇಳಿತ್ತು. ಈಗ ನಮ್ಮ ಹುಡುಗ ಹಿಂತಿರುಗಿರುವುದು ನಮಗೆ ಸಂತೋಷ ತಂದಿದೆ ಎಂದು ಹೇಳಿದರು.
ಜನವರಿ 18ರಂದು ಮಿರಾಮ್ ಟ್ಯಾರೋನ್ ನಾಪತ್ತೆ
ಜನವರಿ 18 ರಂದು, ಮಿರಾಮ್ ಟ್ಯಾರೋನ್ ಅಪಹರಣದ ವರದಿಗಳು ಬೆಳಕಿಗೆ ಬಂದವು, ನಂತರ ಭಾರತೀಯ ಸೇನೆಯು ಪಿಎಲ್ಎ ಅನ್ನು ಸಂಪರ್ಕಿಸಿತು. ಶಿಯುಂಗ್ ಲಾ ಬಿಶಿಂಗ್ ಪ್ರದೇಶದಿಂದ ಬೇಟೆಯಾಡಲು ಹೊರಟಿದ್ದ ಮಿರಾಮ್ ಟ್ಯಾರೋನ್ ನಾಪತ್ತೆಯಾಗಿದ್ದಾನೆ ಎಂದು ಭಾರತೀಯ ಸೇನೆ ತಿಳಿಸಿತ್ತು. ಆತ ದಾರಿ ತಪ್ಪಿದ್ದರೆ ಅಥವಾ ತಮ್ಮ ವಶದಲ್ಲಿದ್ದರೆ, ಆತನನ್ನು ಪತ್ತೆ ಹಚ್ಚಿ ಭಾರತಕ್ಕೆ ತಕ್ಷಣ ಒಪ್ಪಿಸುವಂತೆ ಭಾರತೀಯ ಸೇನೆ ಚೀನಾ ಸೇನೆಗೆ ತಿಳಿಸಿತ್ತು.