ಕಾಸರಗೋಡು: ಕೇರಳದಲ್ಲಿ ಪೊಲೀಸರ ಚಟುವಟಿಕೆಯನ್ನು ನಿಷ್ಕ್ರಿಯಗೊಳಿಸಿ, ಎಸ್‍ಡಿಪಿಐನಂತಹ ಭಯೋತ್ಪಾದಕ ಸಂಘಟನೆಗಳನ್ನು ಪೋಷಿಸುತ್ತಿರುವ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ರಾಜ್ಯವನ್ನು ಮೂಲಭೂತವಾದಿಗಳ ತಾಣವಾಗಿ ಬದಲಾಯಿಸಿದೆ ಎಂದು ಬಿಜೆಪಿ ರಾಜ್ಯ ಸಮಿತಿ ಉಪಾಧ್ಯಕ್ಷ ಎ.ಎನ್ ರಾಧಾಕೃಷ್ಣನ್ ತಿಳಿಸಿದ್ದಾರೆ.
ಅವರು ಶನಿವಾರ ಕಾಸರಗೋಡಿನ ಕರಂದಕ್ಕಾಡಿನಲ್ಲಿ ಬಿಜೆಪಿ ಜಿಲ್ಲಾ ಸಮಿತಿಯಿಂದ ಪಾಪ್ಯುಲರ್ ಫ್ರಂಟ್ ಭಯೋತ್ಪಾದನೆ ವಿರುದ್ಧ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಕೊಡಿಯೇರಿ ಬಾಲಕೃಷ್ಣನ್ ಹಾಗೂ ಎಸ್. ರಾಮಚಂದ್ರ ಪಿಳ್ಳೆ ಅವರಂತಹ ಸಿಪಿಎಂ ಮುಖಂಡರ ಚೀನಾದ ಮೇಲಿನ ಪ್ರೀತಿ, ದೇಶಕ್ಕೆ ಮಾರಕವಾಗಿ ಬದಲಾಗಲಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು. ವಲಯ ಅಧ್ಯಕ್ಷ ಟಿ.ಪಿ ಜಯಚಂದ್ರನ್ ಮಾಸ್ಟರ್ ಮುಖ್ಯ ಭಾಷಣ ಮಾಡಿದರು. ಮುಖಂಡರಾದ ಎಂ. ಸಂಜೀವ ಶೆಟ್ಟಿ, ಪ್ರಮಿಳಾ ಸಿ.ನಾಯ್ಕ್, ಪಿ.ಸುರೇಶ್ ಕುಮಾರ್ ಶೆಟ್ಟಿ, ಎ.ವೇಲಾಯುಧನ್, ಪಿ.ರಮೇಶ್ ಮುಂತಾದವರು ಉಪಸ್ಥಿತರಿದ್ದರು.