ಮುಳ್ಳೇರಿಯ: ಮುಳ್ಳೇರಿಯ ಹವ್ಯಕ ಮಂಡಲ ದಿಸೆಂಬರ್ ತಿಂಗಳ ಸಭೆ ಶಿವಕೃಪಾ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಮಂಡಲ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಅಧ್ಯಕ್ಷತೆ ವಹಿಸಿದ್ದರು.
ಧ್ವಜಾರೋಹಣ, ಶಂಖನಾದ ಗುರುವಂದನೆಯೊಂದಿಗೆ ಸಭೆ ಪ್ರಾರಂಭವಾಯಿತು. ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡಾವು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿ ಗತ ಸಭೆಯ ವರದಿ ನೀಡಿದರು. ಇತ್ತೀಚಿಗೆ ನಿಧನರಾದ ಹವ್ಯಕ ಮುಂದಾಳು ಮಂಗಳೂರು ಹೋಬಳಿ ಮಾಣೀ ಮಠದ ಸ್ಥಾಪಕ ಸದಸ್ಯರೂ ಆದ ಉರಿಮಜಲು ರಾಮ ಭಟ್ ಅವರ ಆತ್ಮಕ್ಕೆ ವಿಷ್ಣು ಸಾಯೂಜ್ಯ ಲಭಿಸಲು ರಾಮತಾರಕ ಮಂತ್ರ ಜಪಿಸಲಾಯಿತು. ವಲಯ ಪದಾಧಿಕಾರಿಗಳು ವಲಯಗಳಲ್ಲಿ ನಡೆದ ಕಾರ್ಯಚಟುವಟಿಕೆಗಳ ವಿವರಗಳನ್ನು ನೀಡಿದರು.
ವಿವಿವಿ ಮುಳ್ಳೇರಿಯಾ ಮಂಡಲದ ಸಂಚಾಲಕ ವೈ ಕೆ ಗೋವಿಂದ ಭಟ್ ಅವರು ವಿಷ್ಣುಗುಪ್ತ ವಿದ್ಯಾ ಪೀಠದ ಬಗ್ಗೆ ವಿವಿಧ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿಗಳನ್ನು ವಿವರಿಸಿದರು ಮತ್ತು ಕೇರಳ ರಾಜ್ಯ ಅಂಗೀಕರಿಸದ ಮುಂದುವರಿದ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಹವ್ಯಕ ಕುಟುಂಬಗಳ ಮಾಹಿತಿ ಸಂಗ್ರಹದ ಬಗ್ಗೆ ವಿವರಿಸಿದರು. ವಿಭಾಗ ಪ್ರಧಾನರು ಆಯಾ ವಿಭಾಗದ ಕಾರ್ಯ ಚಟುವಟಿಕೆಗಳ ವಿವರಣೆಗಳನ್ನಿತ್ತರು. ' ಅಮೃತ ಕನ್ನಡಿಗ ' ಪ್ರಶಸ್ತಿ ಲಭಿಸಿದ ಕಾಮದುಘಾ ಟ್ರಸ್ಟ್ ಅಧ್ಯಕ್ಷ, ಪ್ರಸಿದ್ಧ ಪಶುವೈದ್ಯ ಅಪ್ರತಿಮ ಗೋಪ್ರೇಮಿ ಡಾ. ವೈ.ವಿ.ಕೃಷ್ಣಮೂರ್ತಿ ಅವರನ್ನು ಶಾಲುಹೊದೆಸಿ ಫಲ ಮತ್ತು ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಮಂಡಲ ಮತ್ತು ವಿವಿಧ ವಲಯಗಳ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.