ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಮಾಜಿ ಶಾಸಕ ಇದ್ದಿನಬ್ಬ ಕುಟುಂಬದ ಉಗ್ರ ಸಂಪರ್ಕ ವೃತ್ತಾಂತಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. ಇದಿನಬ್ಬರ ಮಗ ಬಿ.ಎಂ. ಪಾಷಾನ ಮೂರನೇ ಪುತ್ರನ ಪತ್ನಿಯನ್ನು ಎನ್‌ಐಎ ವಶಕ್ಕೆ ಪಡೆದುಕೊಂಡಿದೆ.
ಇದಿನಬ್ಬರ ಮೂರನೇ ಮಗನಾಗಿರುವ ಬಿ.ಎಂ. ಪಾಷಾನ ಮೂರನೇ ಮಗನಾಗಿರುವ ಅನಾಸ್ ಅಬ್ದುಲ್ ರೆಹಮಾನ್‌ನ ಪತ್ನಿಯಾಗಿರುವ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂಳನ್ನು ಎನ್ಐಎ ವಶಕ್ಕೆ ಪಡೆದುಕೊಂಡಿದೆ.
ಅನಾಸ್ ಅಬ್ದುಲ್ ರಹಿಮಾನ್‌ನನ್ನು ಪ್ರೀತಿಸಿ, ದೀಪ್ತಿ ಮಾರ್ಲ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದಳು. ಮೂಲತಃ ಹಿಂದು ಧರ್ಮದವಳಾದ ದೀಪ್ತಿ ಮಾರ್ಲ ಕೊಡಗು ಮೂಲದವಳು. ಮುಸ್ಲಿಂ ಆಗಿ ಮತಾಂತರಗೊಂಡು ಹತ್ತು ವರ್ಷಗಳ ಹಿಂದೆ ಅನಾಸ್ ಅಬ್ದುಲ್ ರೆಹಮಾನ್‌ನನ್ನು ಮದುವೆಯಾಗಿದ್ದರು. ದೇಶದ ಹಲವೆಡೆ ಬಂಧನವಾಗಿರುವ ಐಸಿಸ್ ನೆಟ್‌ವರ್ಕ್ ಸಂಬಂಧಿ ಆರೋಪಿಗಳು ಈಕೆಯ ಹೆಸರನ್ನೇ ಹೇಳಿದ್ದರು. ಹೀಗಾಗಿ ಮರಿಯಂಳನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.
ಕಳೆದ ಅಗಸ್ಟ್ 4ರಂದು ಜಮ್ಮು ಕಾಶ್ಮೀರದಲ್ಲಿ ಬಂಧನವಾಗಿದ್ದ ಆರು ಮಂದಿ ಉಗ್ರರ ಜೊತೆ ಮರಿಯಂ ಸಂಪರ್ಕ ಹೊಂದಿದ್ದಳು. ಅಲ್ಲದೇ ಜಮ್ಮು ಕಾಶ್ಮೀರಕ್ಕೆ ಹೋಗಿ ಉಗ್ರರನ್ನು ಭೇಟಿಯಾಗಿದ್ದಳು. ಆಗಸ್ಟ್ 4ರಂದು ಎನ್ಐಎ ಅಧಿಕಾರಿಗಳು ಮರಿಯಂಳನ್ನೂ ಬಂಧನ ಮಾಡಬೇಕಿತ್ತು. ಆದರೆ ಮರಿಯಂಳಗೆ ಚಿಕ್ಕ ಮಗುವಿದ್ದ ಕಾರಣ ಆರು ತಿಂಗಳು ಸಮಯಾವಕಾಶ ನೀಡಲಾಗಿತ್ತು. ಈಗ ಉಗ್ರ ಸಂಪರ್ಕ ಪ್ರಕರಣದ ಹಿನ್ನಲೆಯಲ್ಲಿ ಮರಿಯಂಳನ್ನು ಬಂಧನ ಮಾಡಲಾಗಿದೆ.
ಕಳೆದ ಬಾರಿ ಆಗಸ್ಟ್ 4ರಂದು ದಾಳಿ ನಡೆಸಿದ್ದ ಎನ್‌ಐಎ ಅಧಿಕಾರಿಗಳ ತಂಡ, ಎರಡು ದಿನಗಳ ದಾಳಿಯ ಬಳಿಕ ಪಾಷಾ ಕಿರಿಯ ಪುತ್ರ ಅಮ್ಮರ್‌ನನ್ನು ಬಂಧಿಸಿತ್ತು. ಉಗ್ರರಿಗೆ ನೆರವಾಗಲು ಹಣ ಸಂಗ್ರಹ ಮಾಡುತ್ತಿದ್ದ ಅಮ್ಮರ್ ಖಾತೆಗೆ ವಿದೇಶದಿಂದ ನೂರಾರು ಕೋಟಿ ರೂಪಾಯಿ ಹರಿದು ಬಂದಿತ್ತು. ಈ ಹಣವನ್ನು ಅಮ್ಮರ್ ಉಗ್ರ ಸಂಘಟನೆಗಳಿಗೆ ನೆರವಾಗುವ ಜನರಿಗೆ ಹಣ ಹಂಚಿದ್ದ.
ಇದರ ಮುಂದುವರಿದ ಭಾಗವಾಗಿ ಮಂಗಳೂರು ಹೊರವಲಯದ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ದಿ. ಇದಿನಬ್ಬ ಪುತ್ರ ಬಿ.ಎಂ. ಪಾಷಾ ಮನೆಗೆ ಎನ್‌ಐಎ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ದೆಹಲಿಯಿಂದ ಬಂದಿದ್ದ ಎನ್‌ಐಎ ತನಿಖಾಧಿಕಾರಿ ಡಿಎಸ್ಪಿ ಕೃಷ್ಣಕುಮಾರ್ ನೇತೃತ್ವದ ಮೂವರ ತಂಡ ಈ ದಾಳಿ ನಡೆಸಿದೆ.
ಈ ಸಂದರ್ಭದಲ್ಲಿ ಬಿ.ಎಂ. ಪಾಷಾ ಸೊಸೆ ದೀಪ್ತಿ ಮಾರ್ಲಾ ಆಲಿಯಾಸ್ ಮರಿಯಂಳನ್ನು ಉಗ್ರ ಸಂಘಟನೆ ಐಸಿಸ್ ಜೊತೆ ನಂಟು ಹೊಂದಿರುವ ಆರೋಪದಲ್ಲಿ ಬಂಧಿಸಿದೆ. ದೀಪ್ತಿ ಮಾರ್ಲಳನ್ನು ಬಂಧಿಸಿ ಉಳ್ಳಾಲದ ಮನೆಯಿಂದ ಟೆಂಪೋ ಟ್ರಾವೆಲರ್ ವಾಹನದಲ್ಲಿ ಕರೆದುಕೊಂಡು ಎನ್‌ಐಎ ತಂಡ ವೆನ್‌ಲಾಕ್ ಜಿಲ್ಲಾಸ್ಪತ್ರೆಗೆ ಕರೆ ತಂದಿತ್ತು. ಮರಿಯಂ ಆರೋಗ್ಯ ತಪಾಸಣೆ ಬಳಿಕ ಜಿಲ್ಲಾ ಕೋರ್ಟ್‌ಗೆ ಹಾಜರುಪಡಿಸಿ ದೆಹಲಿಗೆ ಹೆಚ್ಚಿನ ವಿಚಾರಣೆಗೆ ಕರೆದೊಯ್ಯಲಿದ್ದಾರೆ.