ನವದೆಹಲಿ: ಎನ್‌ಎಸ್‌ಜಿ ಹೆಸರಿನಲ್ಲಿ ತಿರುಚಿದ್ದ ಪ್ರಮಾಣಪತ್ರದ ಆಧಾರದಲ್ಲಿ 1995ರಲ್ಲಿ ಜರ್ಮನಿಯ ಸಿಮೆನ್ಸ್‌ನಿಂದ ಇನ್‌ಕ್ರಿಪ್ಷನ್ ಸಿಸ್ಟಮ್ ಆಮದು ಕುರಿತ ಪ್ರಕರಣದಲ್ಲಿ ಉದ್ಯಮಿ ಹರೀಶ್ ಗುಪ್ತಾ ಅವರನ್ನು ಸಿಬಿಐ ವಿಶೇಷ ಕೋರ್ಟ್ ಖುಲಾಸೆಗೊಳಿಸಿದೆ.
ಸಿಬಿಐ ತನಿಖೆ ಕ್ರಮ ಕುರಿತೂ ತರಾಟೆಗೆ ತೆಗೆದುಕೊಂಡಿರುವ ಕೋರ್ಟ್, 'ಇದೊಂದು ದೇಶದ ಭದ್ರತೆ ಮತ್ತು ಸುರಕ್ಷತೆಗೆ ಅಪಾಯ ತಂದೊಡ್ಡುವ ಗಂಭೀರ ಪ್ರಕರಣ. ಈ ಬಗ್ಗೆ ಆಳವಾದ ತನಿಖೆ ಅಗತ್ಯವಿತ್ತು. ಆದರೆ, ತನಿಖಾಧಿಕಾರಿ ಈ ಸಂಬಂಧ ಸಾಮಾನ್ಯ ತನಿಖೆಯನ್ನು ಮಾಡಿದಂತಿಲ್ಲ' ಎಂದು ಅಭಿಪ್ರಾಯಪಟ್ಟಿತು.
'ತನಿಖಾಧಿಕಾರಿಯು ಉದ್ದೇಶಪೂರ್ವಕವಾಗಿಯೇ ಸ್ವಯಂತೀರ್ಮಾನ ಅಥವಾ ಕೆಲ ಮೇಲಿನವರ ಸೂಚನೆಯಂತೆ ಸಮರ್ಪಕವಾಗಿ ತನಿಖೆ ಮಾಡಿಲ್ಲ ಎಂದು ಕಾಣುತ್ತದೆ. ನಿಜವಾದ ತಪ್ಪಿತಸ್ಥ ಅಥವಾ ಈಗಿನ ಆರೋಪಿಯ ಪಾತ್ರವೇ ಇದ್ದಿದ್ದಾದರೆ ಆತನ ರಕ್ಷಿಸುವ ಉದ್ದೇಶವಿರಬಹುದು' ಎಂದು ವಿಶೇಷ ನ್ಯಾಯಾಧೀಶ ಹರೀಶ್ ಕುಮಾರ್ ಹೇಳಿದರು.
ವಿಚಾರಣೆಯ ವೇಳೆ ಸಿಬಿಐ 11 ಮಂದಿ ಸಾಕ್ಷಿದಾರರನ್ನು ಹಾಜರುಪಡಿಸಿದ್ದು, ಇವರಲ್ಲಿ ಆಗ ಆಂಧ್ರಪ್ರದೇಶದ ರಾಜ್ಯಪಾಲರಾಗಿದ್ದ ನರಸಿಂಹನ್, ಗೃಹ ಸಚಿವಾಲಯದ ಆಗಿನ ಜಂಟಿ ಕಾರ್ಯದರ್ಶಿ ಯು.ಕೆ.ಸಿನ್ಹಾ ಕೂಡಾ ಸೇರಿದ್ದರು.
ವಿಶೇಷ ಕೋರ್ಟ್ ಡಿಸೆಂಬರ್ 22, 2021ರಂದು ಗುಪ್ತಾ ಅವರನ್ನು ವಂಚನೆ ಆರೋಪದಿಂದ ದೋಷಮುಕ್ತಗೊಳಿಸಿತ್ತು. ದಾಖಲೆ ತಿರುಚಿದ ಸಂಬಂಧ ಐಪಿಸಿ 468ರ ಅನ್ವಯ ಮೂರು ವರ್ಷ ಸಜೆ, ₹ 10,000 ದಂಡ ವಿಧಿಸಿ ಆದೇಶಿಸಿತ್ತು. ಗುಪ್ತಾ ಇದರ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ಈಗ ಇತರೆ ಆರೋಪಗಳಿಂದಲೂ ಖುಲಾಸೆಗೊಳಿಸಿದೆ.
ಖುಲಾಸೆಗೊಳಿಸಿ ಆದೇಶಿಸಿದ ಕೋರ್ಟ್, ಸಿಬಿಐ ತನಿಖಾಧಿಕಾರಿ ಅಖಿಲ್ ಕೌಶಿಕ್ ಅವರು ಸತ್ಯಾರ್ಥಿ ಹೊರತುಪಡಿಸಿ ಯಾವುದೇ ಸಾಕ್ಷಿಗಳ ಹೇಳಿಕೆಯನ್ನೂ ಸಿಆರ್‌ಪಿಸಿ ಸೆಕ್ಷನ್ 161ರ ಅನ್ವಯ ದಾಖಲು ಮಾಡಿಲ್ಲ ಎಂದು ಹೇಳಿತು.
ಹಿನ್ನೆಲೆ: 1996ರ ಏಪ್ರಿಲ್ ತಿಂಗಳಲ್ಲಿ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಬೆಲ್ಜಿಯಂ ರಾಯಭಾರ ಕಚೇರಿಯು ಎನ್‌ಎಸ್‌ಜಿಯ ಸ್ವಾಂಡ್ರನ್ ಕಮಾಂಡರ್ ವಿಮಲ್ ಸತ್ಯಾರ್ಥಿ ಅವರಿಗೆ ಪತ್ರ ಬರೆದಿದ್ದು, ಎನ್‌ಕ್ರಿಪ್ಷನ್ ಸಿಸ್ಟಮ್ ಆಮದಿಗೆ ಬಳಕೆ ಪ್ರಮಾಣಪತ್ರವನ್ನು ಹೊಸದಾಗಿ ನೀಡಬೇಕು ಎಂದು ತಿಳಿಸಿತು. ಇಂಥ ಪರಿಕರವನ್ನು ದೇಶದ ಕಾನೂನು ಜಾರಿ ಸಂಸ್ಥೆಗಳಿಗೆ ಮಾತ್ರವೇ ಮಾರಲು ಅವಕಾಶವಿದೆ. ಇದಕ್ಕೂ ಮೊದಲು ಸತ್ಯಾರ್ಥಿ ಯಾರಿಗೂ ಇಂಥ ಪ್ರಮಾಣಪತ್ರ ನೀಡಿರಲಿಲ್ಲ. ಹೀಗಾಗಿ, ಪ್ರಕರಣ ಬಯಲಾಗಿತ್ತು.
ಎನ್‌ಎಸ್‌ಜಿ ಆಂತರಿಕ ತನಿಖೆ ನಡೆಸಿದ್ದು, ಬಳಿಕ ಆಗಿನ ಪ್ರಧಾನ ನಿರ್ದೇಶಕ ಎ.ಕೆ.ಟಂಡನ್ ಅವರು ಗೃಹ ಸಚಿವಾಲಯಕ್ಕೆ ಪತ್ರ ಬರೆದು ತನಿಖೆಗೆ ಕೋರಿದ್ದರು. ತನಿಖೆಯನ್ನು ಸಿಬಿಐಗೆ ಒಪ್ಪಿಸಿದ್ದು, ಎರಡು ತಿಂಗಳ ಪ್ರಾಥಮಿಕ ತನಿಖೆಯ ನಂತರ ಸಿಬಿಐ ಅಕ್ಟೋಬರ್ 12, 1996ರಂದು ಎಫ್‌ಐಆರ್ ದಾಖಲಿಸಿತ್ತು.
ತನಿಖೆಯಿಂದ ಸೆಕ್ಯೂರ್ ಟೆಲಿಕಾಂ ಪ್ರೈವೇಟ್ ಲಿಮಿಟೆಡ್‌ನ ಹರೀಶ್ ಗುಪ್ತಾ ಅವರು ನಕಲಿ ಪ್ರಮಾಣಪತ್ರ ಬಳಸಿ ಪರಿಕರ ಆಮದಿಗೆ ಯತ್ನಿಸಿರುವುದು ತಿಳಿದುಬಂದಿತ್ತು. ಈ ಬಗ್ಗೆ 1998ರ ಸೆಪ್ಟೆಂಬರ್‌ನಲ್ಲಿ ಆರೋಪಪಟ್ಟಿ ದಾಖಲು ಮಾಡಿತ್ತು.