ನವದೆಹಲಿ: ಜನವರಿ 18ರಂದು ನಾಪತ್ತೆಯಾಗಿದ್ದ ಅರುಣಾಚಲಪ್ರದೇಶದ ಯುವಕ ಚೀನಾದಲ್ಲಿ ಪತ್ತೆಯಾಗಿದ್ದಾನೆ. ಅರುಣಾಚಲ ಪ್ರದೇಶದ ಸಿಯುಂಗಾಲಾದ ಲುಂಗ್ಟಾ ಜೋರ್ ಪ್ರದೇಶದ ನಿವಾಸಿ 17 ವರ್ಷದ ಮಿರಮ್ ತರನ್ ನಾಪತ್ತೆಯಾದ ಯುವಕ.
ಈ ಬಗ್ಗೆ ಅರುಣಾಚಲ ಪ್ರದೇಶ ಸಂಸದ ತಪಿರ್ ಗಾವೊ ಅವರು ಮೊದಲ ಬಾರಿಗೆ ಮಾಹಿತಿ ನೀಡಿದ್ದರು. ಚೀನಾ ಸೈನಿಕರು ಈ ಯುವಕನನ್ನು ಅಪಹರಿಸಿದ್ದಾರೆ ಎಂದು ಗಾವೋ ಆರೋಪಿಸಿದ್ದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಚೀನಾದಿಂದ ಭಾರತೀಯ ಯುವಕ ಅಪಹರಣಕ್ಕೊಳಗಾಗಿರುವುದನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಅರುಣಾಚಲದಿಂದ ಯುವಕ ಕಣ್ಮರೆಯಾದ ಬಳಿಕ ಭಾರತೀಯ ಸೇನೆ ಮಿರಮ್ ಗಾಗಿ ಹುಡುಕಾಟ ಆರಂಭಿಸಿದ್ದರು. ಅಲ್ಲದೆ, ಚೀನಾ ಪಿಎಲ್ಎಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಆದರೆ, ಮೊದಲಿಗೆ ಈ ಯುವಕನ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಚೀನಾ ಹೇಳಿತ್ತು.
ಆದರೆ ಇಂದು ತಮ್ಮ ಪ್ರದೇಶದಲ್ಲಿ ಯುವಕನೊಬ್ಬ ಪತ್ತೆಯಾಗಿದ್ದಾನೆ ಎಂದು ಚೀನಾ ಯೋಧರು ಭಾರತೀಯ ಸೇನೆಗೆ ತಿಳಿಸಿದ್ದಾರೆ. ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಚೀನಾ ಸೇನೆಯೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.