ನವದೆಹಲಿ: 1945ರಲ್ಲಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆಂದೇ ಬಿಂಬಿತವಾಗಿರುವ ದೇಶ ಕಂಡ ಅಪರೂಪದ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ರಹಸ್ಯ ಇಷ್ಟು ವರ್ಷಗಳಾದರೂ ರಹಸ್ಯವಾಗಿಯೇ ಉಳಿದಿದೆ. ಇವರ ಸಾವಿಗೆ ಕಾರಣ ಯಾರು ಎಂಬ ಬಗ್ಗೆ ಇದಾಗಲೇ ಸಾಕಷ್ಟು ಚರ್ಚೆಗಳಾಗಿದ್ದು, ಪರ-ವಿರೋಧಗಳ ನಿಲುವು ವ್ಯಕ್ತವಾಗಿದೆ.
ಇದೀಗ ನೇತಾಜಿ ಸುಭಾಷ್‌ಚಂದ್ರ ಬೋಸರ ನಿಗೂಢ ಸಾವಿನ ರಹಸ್ಯವನ್ನು ಭೇದಿಸುವಲ್ಲಿ ತೈವಾನ್ ದಿಟ್ಟ ಹೆಜ್ಜೆಯನ್ನಿಟ್ಟಿದೆ. 1940ರ ದಶಕದಲ್ಲಿ ತೈವಾನ್ ಜಪಾನಿಯರ ವಶದಲ್ಲಿತ್ತು. 1954ರಲ್ಲಿ ಬೋಸ್ ಅವರನ್ನು ಅಲ್ಲಿಯೇ ಕೊನೆಯದಾಗಿ ನೋಡಲಾಗಿತ್ತು. ವಿಮಾನ ಅಪಘಾತದಲ್ಲಿ ನೇತಾಜಿ ಅವರು ಗಾಯಗೊಂಡಿದ್ದರು, ನಂತರ ಅವರನ್ನು ತೈಪೆಯ ಆರ್ಮಿ ಹಾಸ್ಪಿಟಲ್‌ಗೆ ಸಾಗಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದರು ಎಂದೇ ಹೇಳಲಾಗುತ್ತಿದ್ದು, ಈ ಬಗ್ಗೆ ಸತ್ಯಾಸತ್ಯತೆಯನ್ನು ಪರೀಶೀಲಿಸಲು ತೈವಾನ್ ಮುಂದಾಗಿದೆ. ಅಪಘಾತದಲ್ಲಿ ಮೃತಪಟ್ಟಿಲ್ಲ, ಅವರನ್ನು ನಿಗೂಢವಾಗಿ ಕಣ್ಮೆರೆ ಮಾಡಲಾಗಿದೆ ಎಂದೇ ಹಲವರು ನಂಬಿದ್ದರು, ಈಗಲೂ ಅದು ರಹಸ್ಯವಾಗಿಯೇ ಉಳಿದಿದೆ. ಆದ್ದರಿಂದ ಖುದ್ದು ತೈವಾನ್ ಈಗ ಸಾವಿನ ಕುರಿತು ಮರುಶೋಧಿಸಲು ತನ್ನ ರಾಷ್ಟ್ರೀಯ ದಾಖಲೆಗಳು ಮತ್ತು ಡೇಟಾಬೇಸ್ ಪರಿಶೀಲನೆಗೆ ಮುಂದಾಗಿದೆ.
ಈ ಕುರಿತು ಭಾರತ ಸರ್ಕಾರದಿಂದಲೂ ತೈವಾನ್ ಸಹಾಯ ಬಯಸಿದ್ದು, ಇಲ್ಲಿರುವ ಕೆಲವು ದಾಖಲೆಗಳನ್ನು ನೀಡುವಂತೆ ಕೋರಿದೆ. ಜತೆಗೆ ನೇತಾಜಿ ಅವರ ಕುರಿತಂತೆ ಇಲ್ಲಿಯವರೆಗೆ ಹಲವಾರು ಸಂಶೋಧಕರು ಮಾಡಿರುವ ಸಂಶೋಧನೆಗಳ ದಾಖಲೆಗಳು ಹಾಗೂ ಇದಕ್ಕೆ ಅಗತ್ಯ ಇರುವ ಸಾಕ್ಷ್ಯಾಧಾರಗಳನ್ನು ನೀಡುವಂತೆಯೂ ತೈವಾನ್ ಕೋರಿಕೊಂಡಿದೆ.
1930 ಮತ್ತು 1940 ರ ದಶಕಗಳಲ್ಲಿ ತೈವಾನ್‌ನ ಮೇಲೆ ನೇತಾಜಿ ಭಾರಿ ಪ್ರಭಾವ ಬೀರಿದ್ದರು. ನೇತಾಜಿ ಮತ್ತು ಅವರ ಪರಂಪರೆಯ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ತೈವಾನ್ ಬಯಸಿದ್ದು ಈ ಬಗ್ಗೆ ಭಾರತದ ಸಹಾಯವನ್ನೂ ಕೋರಿದೆ. ತೈಪೆ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರದ ಉಪ ಪ್ರತಿನಿಧಿ ಮುಮೀನ್ ಚೇನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತೈವಾನ್ ಭಾರತ ಮತ್ತು ನೇತಾಜಿಯೊಂದಿಗೆ ಅಪೂರ್ವವಾದ ಸಂಬಂಧ ಹೊಂದಿತ್ತು. 1940 ರ ದಶಕದಲ್ಲಿ ರಾಜತಾಂತ್ರಿಕ ಚಿಯಾಂಗ್ ಕೈ-ಶೇಖ್ ಕೂಡ ನೇತಾಜಿಯ ಬಗ್ಗೆ ತಮ್ಮ ದಿನಚರಿಯಲ್ಲಿ ಬರೆದಿದ್ದಾರೆ. ಆದ್ದರಿಂದ ಅವರ ಸಾವಿನ ರಹಸ್ಯ ತಿಳಿದುಕೊಳ್ಳಬೇಕಿದೆ ಎಂದು ತೈವಾನ್ ಹೇಳಿದೆ. ಸುಭಾಸ್ ಚಂದ್ರ ಬೋಸ್ ಅವರು ಭಾರತದಿಂದ ಬ್ರಿಟಿಷ್ ಆಳ್ವಿಕೆಯನ್ನು ಕಿತ್ತೊಗೆಯಲು ಜಪಾನಿನ ಸಹಾಯವನ್ನು ಕೋರಿದ್ದರು ಮತ್ತು ಟೋಕಿಯೋದ ಸಹಾಯದಿಂದ ಭಾರತೀಯ ರಾಷ್ಟ್ರೀಯ ಸೇನೆಯನ್ನು ಬೆಳೆಸಿದ್ದರು. ಇವುಗಳ ಮಧ್ಯೆಯೇ ಅವರು ಕಣ್ಮರೆಯಾಗಿ ನಂತರ ವಿಮಾನ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ನಂಬಿಸಲಾಗಿತ್ತು.
ಬೆಳಕಿಗೆ ಬರುವುದೇ ಗುಮ್‌ನಾಮಿ ಬಾಬಾನ ರಹಸ್ಯ?
ನೇತಾಜಿ ಬೋಸ್ ಅವರ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆಯೇ ಉತ್ತರ ಪ್ರದೇಶ ರಾಜ್ಯದ ಅಯೋಧ್ಯೆಯ ಬಳಿ ಇರುವ ಫೈಜಾಬಾದ್‌ನಲ್ಲಿ ವಿಚಿತ್ರ ಘಟನೆಗಳು ನಡೆದಿದ್ದವು. ಈ ಸ್ಥಳದಲ್ಲಿ 1955 ರಿಂದ 1985ರವರೆಗೆ ಓರ್ವ ಸನ್ಯಾಸಿ ನೆಲೆಸಿದ್ದರು. ಅವರನ್ನು ಜನರು ಬಾಬಾಜಿ, ಸ್ವಾಮೀಜಿ, ಭಗವಾನ್‌ಜಿ ಅಥವಾ ಗುಮ್‌ನಾಮಿ ಬಾಬಾ ಎನ್ನುತ್ತಿದ್ದರು.
ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಇವರು ಭೇಟಿಮಾಡಲು ಬರುತ್ತಿದ್ದ ಜನರನ್ನು ಪರದೆಯ ಅತ್ತಕಡೆಯಿಂದ ಮಾತನಾಡಿಸುತ್ತಿದ್ದರು. ಮುಖವನ್ನು ಯಾರಿಗೂ ತೋರಿಸುತ್ತಿರಲಿಲ್ಲ. ಆದ್ದರಿಂದ ಇವರು ಜನರ ಬಾಯಲ್ಲಿ ಗುಮ್‌ನಾವಿ (ನಿಗೂಢ) ಬಾಬಾ ಎಂದೇ ಕರೆಸಿಕೊಳ್ಳಲು ಶುರುವಾಗಿದ್ದರು. ಇವರ ಬಗ್ಗೆ ಮಾಧ್ಯಮಗಳಲ್ಲಿ ಅನೇಕ ಸುದ್ದಿಗಳ ಪ್ರಕಟವಾಗುತ್ತಿದ್ದವು. ಆದರೆ ಯಾರಿಗೂ ಇವರು ಮುಖ ತೋರಿಸುತ್ತಿರಲಿಲ್ಲ.
ಪೋಸ್ಟಿನ ಮುಖಾಂತರ ಪ್ರತಿದಿನ ಇವರಿಗೆ ಇಂಗ್ಲಿಷ್, ಬೆಂಗಾಲಿ ಹಾಗೂ ಹಿಂದಿಯ ನಾನಾ ರೀತಿಯ ದಿನಪತ್ರಿಕೆಗಳು, ವಾರಪತ್ರಿಕೆಗಳು ಮತ್ತು ಪುಸ್ತಕಗಳು ಬರುತ್ತಿದ್ದವು. ಪ್ರತಿ ಸಂಜೆ ಜೋರಾಗಿ ಶಂಖದ ಧ್ವನಿ ಮಾಡಿ ಪೂಜೆ ಮಾಡುತ್ತಿದ್ದರು.
ಆದರೆ ಇವರು ಯಾರು, ಎಲ್ಲಿಗೆ ಹೋಗುತ್ತಾರೆ ಏನೂ ತಿಳಿಯದಾಗಿತ್ತು. ಅಷ್ಟು ರಹಸ್ಯಮಯವಾಗಿತ್ತು ಇವರ ಜೀವನ. 1985ರ ಸೆಪ್ಟೆಂಬರ್ 19ರ ನಡುರಾತ್ರಿ ರಾಷ್ಟ್ರಧ್ವಜದಲ್ಲಿ ಸುತ್ತಿದ್ದ ಈ ಬಾಬಾರ ಮೃತ ಶರೀರವನ್ನು ಮನೆಯಿಂದ ಹೊರತಂದು ಸರಯೂ ನದಿಯ ದಂಡೆಯ ಗುಪ್ತರ್ ಘಾಟಿನಲ್ಲಿ ಅಂತಿಮ ಸಂಸ್ಕಾರ ನಡೆಸಲಾಗಿತ್ತು.
ಕೊನೆಯದಾಗಿ ಇವರ ಮುಖಕಂಡವರು ಇವರನ್ನು ನೇತಾಜಿ ಸುಭಾಷ್‌ಚಂದ್ರ ಬೋಸ್ ಎಂದೇ ನಂಬಿದ್ದರು. ಇವರ ಈ ನಂಬಿಕೆಗೆ ಇನ್ನಷ್ಟು ಪುಷ್ಟಿ ಕೊಟ್ಟದ್ದು ಅವರ ಮನೆಯಲ್ಲಿ ಸಿಕ್ಕಂಥ ರಾಶಿರಾಶಿ ವಸ್ತುಗಳು. 24 ದೊಡ್ಡ ಪೆಟ್ಟಿಗೆಗಳಲ್ಲಿ ದೊರೆತ ಬಾಬಾರ ಪುಸ್ತಕಗಳು, ಪತ್ರಗಳು, ಜರ್ಮನ್ ಟೈಪ್ ರೈಟರ್ ಮತ್ತು ಬೈನಾಕ್ಯುಲರ್, ರೌಂಡ್ ಫ್ರೇಮಿನ ಕನ್ನಡಕ ಹೀಗೆ ಸುಮಾರು ಎರಡೂವರೆ ಸಾವಿರ ವಿವಿಧ ಬಗೆಯ ವಸ್ತುಗಳು, ಅವರ ಸ್ವಭಾವ, ಅವರು ಇದ್ದ ರೀತಿ ಎಲ್ಲವನ್ನೂ ನೋಡಿದರೆ ಇವರು ಸಾಕ್ಷಾತ್ ನೇತಾಜಿಯವರೇ ಎಂದು ಹೇಳಿದ್ದು, ಇಂದಿಗೂ ನಂಬುತ್ತಿದ್ದಾರೆ.
ಅವರು ಮೃತಪಟ್ಟಬಳಿಕ ಅಲಹಾಬಾದ್ ಹೈಕೋರ್ಟ್ ಆದೇಶದಂತೆ ಇವುಗಳನ್ನು ವಸ್ತು ಸಂಗ್ರಹಾಲಯದಲ್ಲಿ ಇರಿಸಿ ಸಾರ್ವಜನಿಕ ಪ್ರದರ್ಶನಕ್ಕೆ ಅನುವು ಮಾಡಿಕೊಡಬೇಕಿದೆ. ಆದರೆ ಈ ಬಾಬಾ ನಿಗೂಢವಾಗಿಯೇ ಇಹಲೋಕ ತ್ಯಜಿಸಿದರು. ತೈವಾನ್ ಈ ಬಗ್ಗೆ ಬೆಳಕು ಚೆಲ್ಲಿ ನೇತಾಜಿಯವರ ರಹಸ್ಯವನ್ನು ಭೇದಿಸಿ, ಮುಖವಾಡಗಳನ್ನು ಕಳಚಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.