ನವದೆಹಲಿ : ಅಧಿಕಾರಶಾಹಿಯಲ್ಲಿನ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಭಾರೀ ಅಬ್ಬರದೊಂದಿಗೆ ಲೋಕಪಾಲ ವ್ಯವಸ್ಥೆ ಸ್ಥಾಪನೆಗೊಂಡು ಮೂರು ವರ್ಷಗಳು ಕಳೆದಿದ್ದರೂ ಅದು ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಫಲಗೊಂಡಿದೆ ಮಾತ್ರವಲ್ಲ, ಅದು ಪಡೆದಿದ್ದ ಪ್ರಚಾರವೂ ಅಸಮರ್ಥನೀಯವಾಗಿತ್ತು ಎಂಬಂತೆ ಕಂಡುಬರುತ್ತಿದೆ ಮತ್ತು ಲೋಕಪಾಲ ನಿಜಕ್ಕೂ ಮಹಾನ್ ಪರಿಕಲ್ಪನೆಯಾಗಿತ್ತೇ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ ಎಂದು theprint.in ವರದಿ ಮಾಡಿದೆ.
ಅಧ್ಯಕ್ಷರ ನೇತೃತ್ವದಲ್ಲಿ ಕಾರ್ಯಾಚರಿಸುವ, ನಾಲ್ವರು ನ್ಯಾಯಾಂಗ ಮತ್ತು ನಾಲ್ವರು ನ್ಯಾಯಾಂಗೇತರ ಸದಸ್ಯರನ್ನೊಳಗೊಂಡ ಲೋಕಪಾಲ್ ಅನ್ನು ಹಾಲಿ ಮತ್ತು ಮಾಜಿ ಪ್ರಧಾನಿಗಳು, ಕೇಂದ್ರ ಸಚಿವರು, ಮಾಜಿ ಸಂಸದರು ಮತ್ತು ಕೇಂದ್ರ ಸರಕಾರದ ಅಧಿಕಾರಿಗಳು ಸೇರಿದಂತೆ ರಾಷ್ಟ್ರೀಯ ಮಟ್ಟದಲ್ಲಿಯ ಅಧಿಕಾರಸ್ಥರ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ವಿಚಾರಣೆಗಾಗಿ ಸ್ಥಾಪಿಸಲಾಗಿದೆ. ಅಸ್ತಿತ್ವಕ್ಕೆ ಬಂದು ಮೂರು ವರ್ಷಗಳಾಗಿದ್ದರೂ ಲೋಕಪಾಲ್ ವ್ಯವಸ್ಥೆಯು ಕೈಗೆತ್ತಿಕೊಂಡ ಒಂದಾದರೂ ಪ್ರಮುಖ ಭ್ರಷ್ಟಾಚಾರ ಪ್ರಕರಣವನ್ನು ನೆನಪಿಸಿಕೊಳ್ಳುವುದೂ ಕಷ್ಟವಾಗಿದೆ.
ಲೋಕಪಾಲ್ ವೆಬ್‌ಸೈಟ್‌ನಲ್ಲಿ ಲಭ್ಯ ಅಂಕಿಅಂಶಗಳಂತೆ ಈವರೆಗಿನ ಹೆಚ್ಚಿನ ದೂರುಗಳು ಕ್ಷುಲ್ಲಕವಾಗಿವೆ ಅಥವಾ ಅದರ ವ್ಯಾಪ್ತಿಯಿಂದ ಹೊರಗಿವೆ. ಈ ಎಲ್ಲ ವರ್ಷಗಳಲ್ಲಿ ದೂರುಗಳ, ಕ್ಷುಲ್ಲಕ ದೂರುಗಳ ಸಂಖ್ಯೆಯೂ ತೀವ್ರ ಇಳಿಕೆಯಾಗಿದೆ. ಮಾಹಿತಿಗಳು ಲಭ್ಯವಿರುವ ಇತ್ತೀಚಿನ ಅವಧಿಯಾದ 2021ರ ಮೊದಲ ಏಳು ತಿಂಗಳುಗಳಲ್ಲಿ ಕೇವಲ 30 ದೂರುಗಳು ದಾಖಲಾಗಿವೆ ಮತ್ತು ಲೋಕಪಾಲ್‌ನಲ್ಲಿನ ಹಲವಾರು ಪ್ರಮುಖ ಹುದ್ದೆಗಳು ಖಾಲಿಯಾಗಿವೇ ಇವೆ.
ದೂರುಗಳು ಕಡಿಮೆಯಾಗಿವೆ ಎಂದರೆ ದೇಶದಲ್ಲಿ ಭ್ರಷ್ಟಾಚಾರ ಕಡಿಮೆಯಾಗಿದೆ ಎಂದರ್ಥವಲ್ಲ, ಜನರು ಲೋಕಪಾಲ್‌ನಲ್ಲಿ ವಿಶ್ವಾಸ ಕಳೆದುಕೊಂಡಿರುವುದು ಇದಕ್ಕೆ ಕಾರಣ ಎನ್ನುತ್ತಾರೆ ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಮಾಧವ ಗೋಡಬೋಲೆ.
ಲೋಕಪಾಲ್‌ನ ಕಾರ್ಯ ನಿರ್ವಹಣೆಯ ಬಗ್ಗೆ ಪ್ರಮುಖ ದೋಷಾರೋಪಣವನ್ನು ಖುದ್ದು ಅದರ ಸದಸ್ಯರೋರ್ವರೇ ಮಾಡಿದ್ದರು. 2019, ಮಾರ್ಚ್‌ನಲ್ಲಿ ನಾಲ್ವರು ನ್ಯಾಯಾಂಗ ಸದಸ್ಯರ ಪೈಕಿ ಓರ್ವರಾಗಿ ನೇಮಕಗೊಂಡಿದ್ದ ಅಲಹಾಬಾದ್ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶ ದಿಲೀಪ್ ಬಿ.ಭೋಸಲೆ ಅವರು ಪ್ರಮಾಣ ವಚನ ಸ್ವೀಕರಿಸಿದ ಒಂಭತ್ತೇ ತಿಂಗಳಲ್ಲಿ 2020, ಜ.6ರಂದು ವೈಯಕ್ತಿಕ ಕಾರಣಗಳನ್ನು ಮತ್ತು ಮಾಡಲು ಸಾಕಷ್ಟು ಕೆಲಸದ ಕೊರತೆಯನ್ನು ಉಲ್ಲೇಖಿಸಿ ರಾಜೀನಾಮೆಯನ್ನು ನೀಡಿದ್ದರು.
ತಾನು ಬಿಟ್ಟ ನಂತರವೂ ಲೋಕಪಾಲ್‌ನಲ್ಲಿ ಹೆಚ್ಚಿನ ಬದಲಾವಣೆಯೇನೂ ಆಗಿಲ್ಲ. ಅದು ಇದೇ ರೀತಿ ಕಾರ್ಯಾಚರಿಸುವುದನ್ನು ಮುಂದುವರಿಸಿದರೆ ಅದು ತನ್ನ ಸ್ಥಾಪನೆಯ ಉದ್ದೇಶವನ್ನು ಈಡೇರಿಸಲು ವಿಫಲಗೊಳ್ಳುತ್ತದೆ ಎಂದು ನ್ಯಾ.ಭೋಸಲೆ ಅಭಿಪ್ರಾಯಿಸಿದ್ದಾರೆ.
ಲೋಕಪಾಲ್ ವ್ಯವಸ್ಥೆ ಅಸ್ತಿತ್ವಕ್ಕೆ ಬರಲು ಕಾರಣವಾಗಿದ್ದ ಭ್ರಷ್ಟಾಚಾರ ವಿರೋಧಿ ಆಂದೋಲನದೊಂದಿಗೆ ನಿಕಟವಾಗಿ ಗುರುತಿಸಿಕೊಂಡಿದ್ದ ಹಲವಾರು ಜನರೂ ಲೋಕಪಾಲ್ ಬಗ್ಗೆ ಭ್ರಮನಿರಸನಗೊಂಡಿದ್ದಾರೆ.
ಲೋಕಪಾಲ್ ಸ್ಥಾಪನೆಗಾಗಿ ಅಣ್ಣಾ ಹಜಾರೆಯವರು ನಡೆಸಿದ್ದ ಆಂದೋಲನದ ಮುಂಚೂಣಿಯಲ್ಲಿದ್ದ ಆಪ್‌ನ ಮಾಜಿ ನಾಯಕ ಅಶುತೋಷ ಅವರು, ಲೋಕಪಾಲ್ ಯಶಸ್ವಿಯಾಗಬೇಕು ಎಂಬ ಉದ್ದೇಶವನ್ನು ಸರಕಾರವೆಂದೂ ಹೊಂದಿರಲಿಲ್ಲ ಎಂದಿದ್ದಾರೆ.
ನಾಲ್ವರು ನ್ಯಾಯಾಂಗ ಸದಸ್ಯರ ಪೈಕಿ ಎರಡು ಸ್ಥಾನಗಳು 2020ರಿಂದಲೂ ಖಾಲಿಯಿವೆ. 124 ಸಿಬ್ಬಂದಿ ಬಲದ ಮಂಜೂರಾತಿಯನ್ನು ಹೊಂದಿರುವ ಲೋಕಪಾಲ್ ಸಚಿವಾಲಯದಲ್ಲಿಯ ಹಲವಾರು ಪ್ರಮುಖ ಹುದ್ದೆಗಳಿಗೆ ಇನ್ನೂ ನೇಮಕಗಳೇ ಆಗಿಲ್ಲ.
ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಪಿನಾಕಿ ಚಂದ್ರ ಘೋಷ್ ಅವರು ಪ್ರಸ್ತುತ ಲೋಕಪಾಲ್‌ನ ಅಧ್ಯಕ್ಷರಾಗಿದ್ದಾರೆ.
2019-20ರಿಂದ ತನಗೆ ಹಂಚಿಕೆಯಾಗಿರುವ ಹಣವನ್ನೂ ಪೂರ್ಣವಾಗಿ ಬಳಸಿಕೊಳ್ಳಲು ಲೋಕಪಾಲ್‌ಗೆ ಸಾಧ್ಯವಾಗಿಲ್ಲ ಎನ್ನುವುದೂ ಅದು ಸಂಪೂರ್ಣವಾಗಿ ಕಾರ್ಯ ಸಮರ್ಥವಾಗಿಲ್ಲ ಎನ್ನುವುದನ್ನು ಸೂಚಿಸುತ್ತದೆ.
ಲೋಕಪಾಲ್ ಹೆಸರಿಗಷ್ಟೇ ಇದೆ. ಅದಕ್ಕೆ ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ ಹೋರಾಡಲು ಅಧಿಕಾರದ ಕೊರತೆಯಿದೆ ಎಂದು ಕರ್ನಾಟಕದ ಮಾಜಿ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಅಭಿಪ್ರಾಯಿಸಿದ್ದಾರೆ.