ಲಖನೌ: ಲಸಿಕೆ ಪಡೆಯಲು ನಿರಕಾರಿಸಿ ವ್ಯಕ್ತಿಗಳು ವಿಚಿತ್ರವಾಗಿ ವರ್ತಿಸಿರುವ ಎರಡು ಪ್ರತ್ಯೇಕ ಪ್ರಕರಣಗಳು ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ವರದಿಯಾಗಿದೆ.
ಕೋವಿಡ್-19 ಲಸಿಕೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಹತಾಶರಾಗಿ ಪ್ರಯತ್ನಿಸಿರುವ ಓರ್ವ ಮರ ಹತ್ತಿ ಪ್ರತಿಭಟಿಸಿದರೆ, ಮತ್ತೋರ್ವ ಆರೋಗ್ಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾನೆ.
ಒಂದು ವಿಡಿಯೋದಲ್ಲಿ ದೋಣಿ ನಡೆಸುವ ವ್ಯಕ್ತಿಗೆ ಆರೋಗ್ಯ ಕಾರ್ಯಕರ್ತರು ಎಷ್ಟೇ ಮನವರಿಕೆ ಮಾಡಿಕೊಡಲು ಯತ್ನಿಸುತ್ತಿದ್ದರೂ ಆತ ಲಸಿಕೆ ಪಡೆಯುವುದಕ್ಕೆ ನಿರಾಕರಿಸಿರುವುದು ದಾಖಲಾಗಿದೆ.
ಪ್ರತಿಯೊಬ್ಬರೂ ಲಸಿಕೆ ಪಡೆಯುತ್ತಿದ್ದಾರೆ, ನೀವೂ ಪಡೆಯಿರಿ ಎಂದು ಆರೋಗ್ಯ ಕಾರ್ಯಕರ್ತರು ಹೇಳುತ್ತಿದ್ದರೆ, ಆತ ನಿರಾಕರಿಸುತ್ತಿದ್ದ ಒಂದು ಹಂತದಲ್ಲಿ ಆ ವ್ಯಕ್ತಿ ದೋಣಿಯಿಂದ ಧುಮುಕಿ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ.
"ನಿಮ್ಮನ್ನು ನೀರಿಗೆ ಎಸೆಯುತ್ತೇನೆ" ಎಂದು ಆರೋಗ್ಯ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದು ನೀರಿಗೆ ಎಳೆಯಲು ಯತ್ನಿಸಿದ್ದಾನೆ. ಸ್ಥಳೀಯರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದಾರೆ.
ಮತ್ತೊಂದು ವಿಡಿಯೋದಲ್ಲಿ ವ್ಯಕ್ತಿಯೋರ್ವ ಕೋವಿಡ್-19 ಲಸಿಕೆಯನ್ನು ಹಾಕಿಸಿಕೊಳ್ಳುವುದಕ್ಕೆ ನಿರಾಕರಿಸಿ ಮರ ಹತ್ತಿ ಕೂತಿದ್ದಾನೆ. ನನಗೆ ಲಸಿಕೆ ಪಡೆಯುವುದಕ್ಕೆ ಇಷ್ಟವಿಲ್ಲ, ಭಯವಾಗುತ್ತದೆ.
ಮನವರಿಕೆ ಮಾಡಿದ ಬಳಿಕ ಆತ ಮರದಿಂದ ಇಳಿದು ಲಸಿಕೆ ಪಡೆದಿದ್ದಾನೆ. ಈ ಪ್ರಹಸನಗಳ ಬಳಿಕ ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳು ಅತುಲ್ ದುಬೆ ಮಾಹಿತಿ ನೀಡಿದ್ದು ಇಬ್ಬರೂ ವ್ಯಕ್ತಿಗಳು ಲಸಿಕೆ ಪಡೆದಿರುವುದನ್ನು ಸ್ಪಷ್ಟಪಡಿಸಿದ್ದಾರೆ.