ನ್ಯೂಯಾರ್ಕ್: ವಿಮಾನದಲ್ಲಿ ಪ್ರಯಾಣ ಬೆಳೆಸುವ ಸಮಯದಲ್ಲಿ ಎಲ್ಲರಿಗೂ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ. ಇಂಥ ಸಂದರ್ಭದಲ್ಲಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಮಹಿಳೆಯರೊಬ್ಬರನ್ನು ವಿಮಾನದಲ್ಲಿ ಹೋಗಲು ಆಸ್ಪದ ನೀಡಲಾಗಿತ್ತು.
ಮಿಚಿಗನ್ ಮೂಲದ ಶಿಕ್ಷಕಿ ಮಾರೀಸಾ ಫೊಟಿಯೊ ಎಂಬ ಮಹಿಳೆ ಮೂರು ಗಂಟೆ ವಿಮಾನದಲ್ಲಿ ಟಾಯ್ಲೆಟ್‌ನಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇವರು ಷಿಕಾಗೊದಿಂದ ಐಸ್‌ಲ್ಯಾಂಡ್‌ಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ಕರೊನಾ ನೆಗೆಟಿವ್ ರಿಪೋರ್ಟ್ ಅವರ ಬಳಿ ಇತ್ತು. ವಿಮಾನದ ಒಳಗೆ ಪ್ರವೇಶ ಮಾಡುವಾಗಲೂ ಪರೀಕ್ಷೆಯಲ್ಲಿ ನೆಗೆಟಿವ್ ಎಂದೇ ತೋರಿಸಿತು. ವಿಮಾನ ಪ್ರಯಾಣಕ್ಕೂ ಮುನ್ನ ಆರ್‌ಟಿ-ಪಿಸಿಆರ್ ಹಾಗೂ ಐದು ಬಾರಿ ರ‍್ಯಾಪಿಡ್ ಪರೀಕ್ಷೆ ಮಾಡಿಸಿದಾಗ ಅದರಲ್ಲಿಯೂ ನೆಗೆಟಿವ್ ಬಂದಿದೆ.
ಆದರೆ ದುರದೃಷ್ಟಕ್ಕೆ ವಿಮಾನ ಸಾಗುತ್ತಿದ್ದ ವೇಳೆ ಅವರಿಗೆ ಗಂಟಲು ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ರ‍್ಯಾಪಿಡ್ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಆಗ ಪಾಸಿಟಿವ್ ಎಂದು ಬಂದಿದೆ. ಆದ್ದರಿಂದ ಕೂಡಲೇ ಅವರನ್ನು ವಿಮಾನದಲ್ಲಿರುವ ಟಾಯ್ಲೆಟ್ ಒಳಗೆ ಇರಿಸಿ ಕ್ವಾರಂಟೈನ್ ಮಾಡಲಾಗಿದೆ. ಅಂದಹಾಗೆ ಇವರಿಗೆ ಎರಡೂ ಡೋಸ್ ಲಸಿಕೆ ಆಗಿದೆ.
ಚಲಿಸುತ್ತಿದ್ದ ವಿಮಾನದಲ್ಲಿದ್ದಾಗ ನನಗೆ ಕೋವಿಡ್ ತಗುಲಿರುವ ವಿಚಾರ ತಿಳಿದು ಅಳು ಬಂತು. ವಿಮಾನ ಪ್ರಯಾಣಕ್ಕೂ ಮುನ್ನ ನನ್ನ ಕುಟುಂಬದವರೊಂದಿಗೆ ಊಟ ಮಾಡಿದ್ದೆ. ವಿಮಾನದಲ್ಲಿ ಹಲವರ ಪ್ರಯಾಣ ಬೆಳೆಸುತ್ತಿದ್ದೇನೆ. ಈ ಎಲ್ಲಾ ವಿಷಯಗಳನ್ನು ನೆನೆದು ನನಗೆ ಭಯವಾಯಿತು ಎಂದು ಶಿಕ್ಷಕಿ ಹೇಳಿಕೊಂಡಿದ್ದಾರೆ.
ಸೋಂಕು ದೃಢಪಟ್ಟಾಗ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿತ್ತು. ಆದರೆ ವಿಮಾನದಲ್ಲಿ ಪ್ರಯಾಣಿಕರು ತುಂಬಿದ್ದರಿಂದ ಅನಿವಾರ್ಯವಾಗಿ ಟಾಯ್ಲೆಟ್‌ನಲ್ಲಿ ಐಸೊಲೇಟ್ ಆಗುವಂತೆ ನೋಡಿಕೊಳ್ಳಬೇಕಾಯಿತು ಎಂದು ವಿಮಾನದ ಸಿಬ್ಬಂದಿ ತಿಳಿಸಿದ್ದಾರೆ.