ನವದೆಹಲಿ :ನೇತಾಜಿ ಸುಭಾಷಚಂದ್ರ ಬೋಸ್ ಅವರ 125ನೇ ಜನ್ಮದಿನವಾದ ರವಿವಾರ ಪ್ರಧಾನಿ ನರೇಂದ್ರ ಮೋದಿಯವರು ಇಲ್ಲಿಯ ಇಂಡಿಯಾ ಗೇಟ್‌ನಲ್ಲಿ ಈ ಅಪ್ರತಿಮ ಸ್ವಾತಂತ್ರ ಹೋರಾಟಗಾರನ ಹೊಲೊಗ್ರಾಮ್ ಪ್ರತಿಮೆಯನ್ನು ಅನಾವರಣಗೊಳಿಸಿದರು. ಗ್ರಾನೈಟ್ ಶಿಲೆಯ ನೇತಾಜಿ ಪ್ರತಿಮೆ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಅದನ್ನು ಹೊಲೊಗ್ರಾಮ್ ಪ್ರತಿಮೆಯ ಜಾಗದಲ್ಲಿ ಸ್ಥಾಪಿಸಲಾಗುವುದು.
ಈ ಸಂದರ್ಭ ಮೋದಿಯವರು 2019ರಿಂದ 2022ರವರೆಗಿನ ಒಟ್ಟು ಏಳು 'ಸುಭಾಷಚಂದ್ರ ಬೋಸ್ ಆಪದಾ ಪ್ರಬಂಧನ ಪುರಸ್ಕಾರ'ಗಳನ್ನು ಪ್ರದಾನಿಸಿದರು. ಭಾರತದಲ್ಲಿ ವಿಪತ್ತು ವ್ಯವಸ್ಥಾಪನೆ ಕ್ಷೇತ್ರದಲ್ಲಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ಅಮೂಲ್ಯ ಕೊಡುಗೆ ಮತ್ತು ನಿಸ್ವಾರ್ಥ ಸೇವೆಯನ್ನು ಗುರುತಿಸಿ ಗೌರವಿಸಲು ಕೇಂದ್ರ ಸರಕಾರವು ಈ ವಾರ್ಷಿಕ ಪ್ರಶಸ್ತಿಯನ್ನು ಸ್ಥಾಪಿಸಿದೆ.
ನಿಜವಾದ ಪ್ರತಿಮೆಯಂತೆಯೇ ಕಾಣುವ 3ಡಿ ಬಿಂಬವಾಗಿರುವ ಹೊಲೊಗ್ರಾಮ್ ಪ್ರತಿಮೆಯು 30,000 ಲುಮೆನ್‌ಗಳ 4ಕೆ ಪ್ರಾಜೆಕ್ಟರ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ.