ನವದೆಹಲಿ: ದೇಶಕ್ಕಾಗಿ ಹುತಾತ್ಮರಾದ ಯೋಧರ ಸ್ಮರಣೆಗೆ ಸ್ಥಾಪಿಸಲಾಗಿರುವ 'ಅಮರ ಜವಾನ್ ಜ್ಯೋತಿ'ಯಲ್ಲಿದ್ದ ಶಾಶ್ವತ ಜ್ಯೋತಿಯನ್ನು ನಂದಿಸಿ, ಅದನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಇದ್ದ ಜ್ಯೋತಿಯ ಜತೆಗೆ ಶುಕ್ರವಾರ ವಿಲೀನ ಮಾಡಲಾಗಿದೆ.
ಸರ್ಕಾರವು ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. ಟೀಕಾಕಾರರಿಗೆ ಸರಿಯಾದ ಮಾಹಿತಿ ಇಲ್ಲ ಎಂದು ಹೇಳಿದೆ. ಏಳು ದಶಕಗಳಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಿಸಲು ವಿಫಲವಾಗಿದ್ದ ಜನರು, ಹುತಾತ್ಮರಿಗೆ ತಕ್ಕದಾದ ಕಾಯಂ ನಮನ ಸಲ್ಲಿಸಿದಾಗ ದೊಡ್ಡ ಹುಯಿಲು ಎಬ್ಬಿಸಿದ್ದಾರೆ ಎಂದು ಸರ್ಕಾರ ಹೇಳಿದೆ.
ಇಂಡಿಯಾ ಗೇಟ್‌ನಲ್ಲಿ ಇದ್ದ ಶಾಶ್ವತ ಜ್ಯೋತಿಯನ್ನು ನಂದಿಸಿಲ್ಲ. ಅದನ್ನು ರಾಷ್ಟ್ರೀಯ ಯುದ್ಧ ಸ್ಮಾರಕದ ಜ್ಯೋತಿಯಲ್ಲಿ ವಿಲೀನ ಮಾಡಲಾಗಿದೆ. 1971ರ ಯುದ್ಧದ ಹುತಾತ್ಮರ ನೆನಪಿಗೆ ಹಚ್ಚಲಾದ ಜ್ಯೋತಿಯ ಜತೆಗೆ ಒಂದೇ ಒಂದು ಹೆಸರು ಕೆತ್ತಲಾಗಿಲ್ಲ ಎಂಬುದು ಎಂತಹ ವಿಚಿತ್ರ ಎಂದೂ ಸರ್ಕಾರ ಟೀಕೆ ಮಾಡಿದೆ.
'ಒಂದನೇ ಮಹಾ ಯುದ್ಧದಲ್ಲಿ ಬ್ರಿಟಿಷರ ಪರವಾಗಿ ಹೋರಾಡಿ ಮಡಿದವರು, ಆಂಗ್ಲೊ-ಅಫ್ಘನ್ ಯುದ್ಧದಲ್ಲಿ ಹೋರಾಡಿ ಹುತಾತ್ಮರಾದವರ ಹೆಸರು ಮಾತ್ರ ಇಂಡಿಯಾ ಗೇಟ್‌ನಲ್ಲಿ ಇದೆ. ಇದು ನಮ್ಮ ವಸಾಹತುಶಾಹಿ ಇತಿಹಾಸದ ಸಂಕೇತ' ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಆದರೆ, ಎಲ್ಲ ಯುದ್ಧಗಳಲ್ಲಿ ಹುತಾತ್ಮರಾದ ಎಲ್ಲರ ಹೆಸರನ್ನೂ ಯುದ್ಧ ಸ್ಮಾರಕದಲ್ಲಿ ಕೆತ್ತಲಾಗಿದೆ ಎಂದು ಹೇಳಲಾಗಿದೆ.
ಯುದ್ಧ ಸ್ಮಾರಕದಲ್ಲಿ ಹೊಸತೊಂದು ಜ್ಯೋತಿ ಬೆಳಗಲಾಗುವುದು. ಆದರೆ, ಅಮರ ಜವಾನ್ ಜ್ಯೋತಿಯಲ್ಲಿ ಇರುವ ಜ್ಯೋತಿಯನ್ನು ಹಾಗೆಯೇ ಉಳಿಸಿಕೊಳ್ಳಲಾಗುವುದು. ಈ ಜ್ಯೋತಿಯು ನಮಗೆ ಪರಂಪರೆಯಿಂದ ಬಂದಿದ್ದು ಎಂದು ರಾಷ್ಟ್ರೀಯ ಯುದ್ಧ ಸ್ಮಾರಕದ ಬಗ್ಗೆ 2019ರಲ್ಲಿ ಮಾಹಿತಿ ನೀಡಿದ್ದ ಸೇನಾಧಿಕಾರಿ ಲೆ. ಜ. ಪಿ.ಎಸ್. ರಾಜೇಶ್ವರ್ ಹೇಳಿದ್ದರು.
'ನಮ್ಮ ದಿಟ್ಟ ಯೋಧರಿಗಾಗಿ ಹಚ್ಚಲಾಗಿದ್ದ ಶಾಶ್ವತ ಜ್ಯೋತಿಯನ್ನು ನಂದಿಸಿದ್ದು ಬಹಳ ದುಃಖದ ಸಂಗತಿ. ಕೆಲವು ಜನರಿಗೆ ದೇಶಭಕ್ತಿ ಮತ್ತು ತ್ಯಾಗವು ಅರ್ಥವೇ ಆಗುವುದಿಲ್ಲ. ಅದೇನೇ ಇರಲಿ, ನಮ್ಮ ಯೋಧರಿಗಾಗಿ ನಾವು ಅಮರ ಜವಾನ್ ಜ್ಯೋತಿಯನ್ನು ಇನ್ನೊಮ್ಮೆ ಹಚ್ಚೋಣ' ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.