ನವದೆಹಲಿ: ಕಳೆದ ಮೇ ನಂತರ ದೇಶದಲ್ಲಿ ಅತಿ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್-19 ಉಲ್ಬಣವನ್ನು ಪರಿಶೀಲಿಸಲು ಭಾನುವಾರ ಉನ್ನತ ಮಟ್ಟದ ಸಭೆ ನಡೆಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಇಂದು ದೇಶದಲ್ಲಿ 1,59,632 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದು ಕಳೆದ 224 ದಿನಗಳಲ್ಲೇ ಅತಿ ಹೆಚ್ಚು.
ಜಿಲ್ಲೆಗಳಲ್ಲಿ ಸಾಕಷ್ಟು ಆರೋಗ್ಯ ಮೂಲಸೌಕರ್ಯವನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಪ್ರಧಾನಿ ಮೋದಿ ಸಭೆಯಲ್ಲಿ ಒತ್ತಿ ಹೇಳಿದರು. ಈ ಬಗ್ಗೆ ರಾಜ್ಯಗಳೊಂದಿಗೆ ಸಮನ್ವಯವನ್ನು ಕಾಪಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ದೇಶದಲ್ಲಿ 15 ರಿಂದ 18 ವರ್ಷದವರಿಗೆ ಲಸಿಕೆ ನೀಡುವ ವೇಗವನ್ನು ಹೆಚ್ಚಿಸುವಂತೆ ಸೂಚಿಸಿದ ಪ್ರಧಾನಿ ಮೋದಿ, ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿರುವ ಪ್ರದೇಶಗಳಲ್ಲಿ ಕಠಿಣ ನಿರ್ಬಂಧ ಮತ್ತು ಕಣ್ಗಾವಲು ವ್ಯವಸ್ಥೆ ಮುಂದುವರಿಸಬೇಕು ಎಂದು ಹೇಳಿದರು.
ಕೋವಿಡ್ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗುತ್ತಿರುವ ರಾಜ್ಯಗಳಿಗೆ ಅಗತ್ಯವಾದ ತಾಂತ್ರಿಕ ಬೆಂಬಲವನ್ನು ಒದಗಿಸುವುದಾಗಿ ಪ್ರಧಾನಿ ಮೋದಿ ತಿಳಿಸಿದರು. ಅಲ್ಲದೆ ಈ ಸಂಬಂಧ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದೇ ವೇಳೆ ರಾಜ್ಯಗಳ ಕೋವಿಡ್ ಸ್ಥಿತಿಗತಿ, ಸಾರ್ವಜನಿಕ ಆರೋಗ್ಯಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಚರ್ಚಿಸಲು ಶೀಘ್ರದಲ್ಲೆ ಮುಖ್ಯಮಂತ್ರಿಗಳ ಸಭೆ ಕರೆಯಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದರು.