ಕಾಸರಗೋಡು: ಮಾಲಿನ್ಯವನ್ನು ಬೇರ್ಪಡಿಸಿ ಅವುಗಳ ಸಂಸ್ಕರಣೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಹಾಗೂ ಹೊಸ ಸಂಸ್ಕøತಿ ಬೆಳೆಸುವ ನಿಟ್ಟಿನಲ್ಲಿ ಆರಂಭಿಸಲಾಗಿರುವ 'ಕಲೆಕ್ಟರ್ಸ್ ಅಟ್ ಸ್ಕೂಲ್'ಯೋಜನೆಯ ಎರಡನೇ ಹಂತದ ಜಿಲ್ಲಾಮಟ್ಟದ ಉದ್ಘಾಟನೆ ಉದುಮ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು. ಶಾಲೆಯಲ್ಲಿ ಸಂಗ್ರಹವಾಗುವ ವಿವಿಧ ಕಸ, ತ್ಯಾಜ್ಯವನ್ನು ವಿವಿಧ ಕೋಶಗಳಲ್ಲಿ ಸಂಗ್ರಹಿಸಿ, ನಂತರ ಸಂಸ್ಕರಿಸುವುದು ಯೋಜನೆಯ ಉದ್ದೇಶವಾಗಿದೆ.
ಶಾಸಕ ಸಿ.ಎಚ್ ಕುಞಂಬು ಯೋಜನೆ ಉದ್ಘಾಟಿಸಿದರು. ಉದುಮ ಗ್ರಾಪಂ ಅಧ್ಯಕ್ಷೆ ಪಿ.ಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ 'ಶುಚಿತ್ವ ಪ್ರತಿಜ್ಞೆ' ಹಾಗೂ 'ನನ್ನ ಪರಿಸರದಲ್ಲಿ'ಎಂಬ ವಿಡಿಯೋ ಪ್ರದರ್ಶನ ನಡೆಯಿತು.
ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷೆ ಸೈನಬಾ, ಕಾಞಂಗಾಡು ಶೈಕ್ಷಣಿಕ ಜಿಲ್ಲಾ ವಿದ್ಯಾಧಿಕಾರಿ ಭಾಸ್ಕರನ್ ಉಪಸ್ಥಿತರಿದ್ದರು. ಜಿಲ್ಲಾ ಶುಚಿತ್ವ ಮಿಶನ್ ಸಹಾಯಕ ಕೋರ್ಡಿನೇಟರ್ ಪ್ರೇಮರಾಜನ್ ಸ್ವಾಗತಿಸಿದರು. ಪ್ರಾಂಶುಪಾಲ ಎನ್.ಪಿ ಶಾಜಿ ವಂದಿಸಿದರು.