ಕಾಸರಗೋಡು: ಪ್ರವಾಸಿ ನಕ್ಷೆಯಲ್ಲಿ ಕಾಸರಗೋಡು ತನ್ನ ಸ್ಥಾನವನ್ನು ಗುರುತಿಸುವ ಸಾಧ್ಯತೆಯಿದೆ. ಈ ಎಲ್ಲ ಸಾಧ್ಯತೆಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಜಿಲ್ಲೆಯ ಪ್ರವಾಸೋದ್ಯಮದ ಚಹರೆಯೇ ಬದಲಾಗಲಿದ್ದು, ಪ್ರವಾಸಿಗರ ಸಂಖ್ಯೆಯೂ ಹೆಚ್ಚಲಿದೆ. ಐತಿಹಾಸಿಕ ಕೋಟೆಗಳು, ಗಿರಿಧಾಮಗಳು, ಹಿನ್ನೀರು, ಕಡಲತೀರಗಳು, ಗ್ರಾಮ ಪ್ರವಾಸೋದ್ಯಮ, ಆರಾಧನಾಲಯ ಪ್ರವಾಸೋದ್ಯಮ, ಐತಿಹಾಸಿಕ ಪ್ರವಾಸೋದ್ಯಮ ಮತ್ತು ಜಲ ಪ್ರವಾಸೋದ್ಯಮವನ್ನು ಸಾಕಾರಗೊಳಿಸಬಹುದಾದ ಕೇರಳದ ಏಕೈಕ ಜಿಲ್ಲೆ ಕಾಸರಗೋಡು. ಗ್ರಾಮೀಣ ಪ್ರವಾಸೋದ್ಯಮ ಸಾಮಥ್ರ್ಯದಲ್ಲಿ ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ಬಳಸಿಕೊಂಡರೆ ಆರ್ಥಿಕ ಅಭಿವೃದ್ಧಿಯೂ ಸಾಧ್ಯವಾಗುತ್ತದೆ ಎಂದು ಸಲಹೆ ವ್ಯಕ್ತಗೊಂಡಿದೆ.
ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂಠನ್ ಈ ನಿಟ್ಟಿನ ವಿಚಾರ ಸಂಕಿರಣವನ್ನು ಶನಿವಾರ ಉದ್ಘಾಟಿಸಿದರು. ಪ್ರವಾಸೋದ್ಯಮ ಸಹಕಾರ ಸಂಘದ ಅಧ್ಯಕ್ಷ ಸಿ.ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರೀಯ ವಿಶ್ವವಿದ್ಯಾಲಯದ ಪ್ರವಾಸೋದ್ಯಮ ವಿಭಾಗದ ಅಧ್ಯಾಪಕ ಯು. ನಾಗರಾಜ್ ಶರ್ಮಾ ವಿಷಯ ಮಂಡಿಸಿದರು. ಕಾಞಂಗಾಡು ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಕೆ.ವಿ.ಶ್ರೀಲತಾ, ಅಜಾನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕೆ.ಸಬೀಶ್, ಜಿಲ್ಲಾ ವಾರ್ತಾ ಅಧಿಕಾರಿ ಎಂ. ಮಧುಸೂದನನ್, ಬಿಆರ್‍ಡಿಸಿ ವ್ಯವಸ್ಥಾಪಕ ನಿರ್ದೇಶಕ ಶಿಜಿನ್ ಪರಂಬತ್ ಡಿಟಿಪಿಸಿ ಕಾರ್ಯದರ್ಶಿ ಲಿಜೋ ಜೋಸೆಫ್ ಕಾಸರಗೋಡು ಜವಾಬ್ದಾರಿಯುತ ಪ್ರವಾಸೋದ್ಯಮ ಮಿಷನ್ ಜಿಲ್ಲಾ ಸಂಯೋಜಕಿ ಧನ್ಯ ಟಿ, ಮಾಧ್ಯಮ ಕಾರ್ಯಕರ್ತ ಎ.ವಿ.ಸುರೇಶ್ ಕುಮಾರ್, ಬೇಕಲ ಟೂರಿಸಂ ಫ್ರೆಟರ್ನಿಟಿ ಅಧ್ಯಕ್ಷ ಸೈಫುದ್ದೀನ್ ಕಳನಾಡ್ ಕೇರಳ ಬ್ಯಾಂಕ್ ವ್ಯವಸ್ಥಾಪಕ ಪ್ರಕಾಶನ ಪ್ರವಾಸ.ನಾರಾಯಣನ್ ಮಾತನಾಡಿದರು.