ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಪಂಜಾಬ್ ಭೇಟಿಯ ಸಂದರ್ಭದಲ್ಲಿ ಸಂಭವಿಸಿದ ಭದ್ರತಾ ಲೋಪಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ಪಂಜಾಬ್ ಸರ್ಕಾರ ನಡೆಸುತ್ತಿರುವ ಎರಡು ಪ್ರತ್ಯೇಕ ಸಮಿತಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದ್ದು, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಲು ಒಪ್ಪಿಗೆ ನೀಡಿದೆ.
ಡಿಜಿಪಿ ಚಂಡೀಗಢ, ಎನ್‌ಐಎ ಐಜಿ ಮತ್ತು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಭಾಗವಾಗಿರುವ ಸಮಿತಿಯನ್ನು ಸ್ಥಾಪಿಸುವ ಕುರಿತು ಶೀಘ್ರದಲ್ಲೇ ವಿವರವಾದ ಆದೇಶಗಳನ್ನು ಹೊರಡಿಸಲಾಗುವುದು ಎಂದು ಹೇಳಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಪಂಜಾಬ್ ನ ಫಿರೋಝ್ ಪುರದಲ್ಲಿನ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಭದ್ರತಾ ಲೋಪ ನಡೆದ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕೋರಿ ವಕೀಲರ ಧ್ವನಿ ಎಂಬ ಸಂಘಟನೆ ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ಜನವರಿ 5 ರಂದು, ಫಿರೋಜ್‌ಪುರದಲ್ಲಿ ಪ್ರತಿಭಟನಾಕಾರರ ದಿಗ್ಬಂಧನದಿಂದಾಗಿ ಪ್ರಧಾನಿಯವರ ಬೆಂಗಾವಲು ಪಡೆ ಹೆದ್ದಾರಿಯಲ್ಲಿ ಸಿಕ್ಕಿಹಾಕಿಕೊಂಡಿತ್ತು. ಬಳಿಕ ಯಾವುದೇ ಕಾರ್ಯಕ್ರಮದಲ್ಲೂ ಭಾಗಿಯಾಗದೆ ವಾಪಸ್ಸಾಗಿದ್ದರು.
ಕಳೆದ ವಾರ ಪಂಜಾಬ್‍ನಲ್ಲಿ ಪ್ರಧಾನಿ ಮೋದಿ ಭದ್ರತಾ ಲೋಪವನ್ನು ತನಿಖೆ ಮಾಡುವ ಸ್ವತಂತ್ರ ಸಮಿತಿಯಲ್ಲಿ ಡಿಜಿಪಿ ಚಂಡೀಗಢ, ಐಜಿ ರಾಷ್ಟ್ರೀಯ ತನಿಖಾ ಸಂಸ್ಥೆ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಮತ್ತು ಪಂಜಾಬ್‍ನ ಎಡಿಜಿಪಿ (ಭದ್ರತೆ) ಅವರನ್ನು ಸೇರಿಸುವ ಬಗ್ಗೆ ನ್ಯಾಯಾಲಯ ಪ್ರಸ್ತಾಪಿಸಿತ್ತು.
ಇದಕ್ಕೂ ಮುನ್ನ ಶುಕ್ರವಾರದ ವಿಚಾರಣೆಯಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ ಎನ್‍ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಪಂಜಾಬ್ ಭೇಟಿಯ ಸಂದರ್ಭದಲ್ಲಿ ಅವರ ಪ್ರಯಾಣದ ದಾಖಲೆಗಳನ್ನು ಸುರಕ್ಷಿತವಾಗಿರಿಸಲು ಮತ್ತು ಸಂರಕ್ಷಿಸುವಂತೆ ಸೂಚಿಸಿತ್ತು.
ನ್ಯಾಯಾಲಯವು ಪಂಜಾಬ್ ಮತ್ತು ಪೊಲೀಸ್ ಅಧಿಕಾರಿಗಳು, ಎಸ್‍ಪಿಜಿ ಮತ್ತು ಇತರ ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳಿಗೆ ಸಹಕರಿಸಲು, ಅಗತ್ಯ ನೆರವು ನೀಡುವಂತೆ ನಿರ್ದೇಶಿಸಿದೆ.
ಪ್ರಧಾನಿ ಮೋದಿ ಅವರ ಫಿರೋಜ್‍ಪುರ ಭೇಟಿಯ ಸಂದರ್ಭದಲ್ಲಿ ಭದ್ರತಾ ಲೋಪವನ್ನು ತನಿಖೆ ಮಾಡುವ ಕೇಂದ್ರ ತಂಡವು ಶುಕ್ರವಾರ ಪಂಜಾಬಿಗೆ ತೆರಳಿತ್ತು. ಆದರೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ವರದಿಯನ್ನು ಸಲ್ಲಿಸಿದ್ದು, ಈ ವಿಷಯದಲ್ಲಿ 150 ಮಂದಿಯ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ ಮತ್ತು ದ್ವಿಸದಸ್ಯ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದೆ.
ಕೇಂದ್ರದ ತ್ರಿಸದಸ್ಯ ಸಮಿತಿಯು ಮೋದಿಯವರ ಜನವರಿ 5 ರ ಭೇಟಿಯ ಸಂದರ್ಭದಲ್ಲಿ ನಡೆದ ಘಟನೆಗಳ ಅನುಕ್ರಮದ ಬಗ್ಗೆ ವಿವರಗಳನ್ನು ಕೇಳಲಿದೆ. ತಂಡವು ಮೊದಲು ಫಿರೋಜ್‍ಪುರ ಬಳಿಯ ಪಯರಾಯನ ಮೇಲ್ಸೇತುವೆಗೆ ತೆರಳಿ ಹಿರಿಯ ಪಂಜಾಬ್ ಪೊಲೀಸ್ ಮತ್ತು ನಾಗರಿಕ ಆಡಳಿತ ಅಧಿಕಾರಿಗಳೊಂದಿಗೆ ಸಂವಾದ ನಡೆಸಿತು.