ಬದಿಯಡ್ಕ: ನೀರ್ಚಾಲು ಸಮೀಪದ ಕುಕ್ಕಂಕೂಡ್ಲು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಜ.22ರಿಂದ ಆರಂಭವಾಗಿದ್ದು ಭಾನುವಾರ ಬೆಳಗ್ಗೆ 9.10ರ ಶುಭಲಗ್ನದಲ್ಲಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ ಜರಗಲಿದೆ. ಭಕ್ತಾದಿಗಳಿಗೆ ಅವಭೃತ ಪ್ರೋಕ್ಷಣೆ, ಮಧ್ಯಾಹ್ನ ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ.
ಶನಿವಾರ ಬೆಳಿಗ್ಗೆ ಗಣಪತಿಹೋಮ, ಶಾಂತಿಹೋಮ, ಪ್ರಾಯಶ್ಚಿತ್ತ ಹೋಮ, ತತ್ವಹೋಮ, ತತ್ವಕಲಶ, ಕುಂಭೇಷ ಕರ್ಕರೀ ಪೂಜೆ, ಅಂಕುರಪೂಜೆ, ವಿದುಷಿ ರಾಧಾಮುರಳೀಧರ ಕಾಸರಗೋಡು ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ಮಧ್ಯಾಹ್ನ ಸೋಪಾನಪೂಜೆ, ಮಂಟಪ ಸಂಸ್ಕಾರ, ಬ್ರಹ್ಮಕಲಶಪೂಜೆ, ಮಹಾಪೂಜೆ ಜರಗಿತು. ಸಂಜೆ ಭಜನೆ, ಪರಿಕಲಶ ಪೂಜೆ, ಅಧಿವಾಸ ಹೋಮ, ಅಧಿವಾಸ ಬಲಿ, ಕಲಶಾಧಿವಾಸ, ಸೋಪಾನ ಪೂಜೆ, ಮಹಾಬಲಿ ಪೀಠಾಧಿವಾಸ ವಿಧಿಗಳು ನಡೆಯಿತು.
ಸಮಾರೋಪ ಸಮಾರಂಭ :
ಭಾನುವಾರ ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ. ನರೇಶ್ ರೈ ಅಧ್ಯಕ್ಷತೆಯ ವಹಿಸಲಿದ್ದಾರೆ. ಧಾರ್ಮಿಕ ಚಿಂತಕ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ವಸಂತ ಪೈ ಬದಿಯಡ್ಕ ಸಮಾರೋಪ ಭಾಷಣ ಮಾಡಲಿದ್ದಾರೆ. ಕರ್ನಾಟಕ ಬ್ಯಾಂಕ್ ಮಂಗಳೂರು ಜನರಲ್ ಮೇನೇಜರ್ ಮಹಾಲಿಂಗೇಶ್ವರ ಕೆ., ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಜಾ ಭಟ್, ಬ್ಲೋಕ್ ಪಂಚಾಯಿತಿ ಸದಸ್ಯೆ ಅಶ್ವಿನಿ ಭಟ್, ಕಾಸರಗೋಡು ನಗರಸಭಾ ಸದಸ್ಯೆ ಸವಿತಾ ಐ. ಭಟ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಮಹಿಳಾ ಘಟಕದ ಗೌರವಾಧ್ಯಕ್ಷೆ ಮೈನಾ ಜಿ.ರೈ, ರಾಜೇಶ್ವರಿ ಉಳಿಪ್ಪಾಡಿಗುತ್ತು ಬೆಂಗಳೂರು, ಜೀರ್ಣೋದ್ದಾರ ಸಮಿತಿ ಕೋಶಾಧಿಕಾರಿ ಪೆರ್ವ ಕೃಷ್ಣ ಭಟ್, ಮುಖ್ಯ ಅರ್ಚಕ ರಾಮಕೃಷ್ಣ ಮಯ್ಯ, ಸಾಂಸ್ಕøತಿಕ ಸಮಿತಿ ಸಂಚಾಲಕ ಡಾ| ಶಶಿರಾಜ ನೀಲಂಗಳ, ಪ್ರಧಾನ ಕಾರ್ಯದರ್ಶಿ ಸುಂದರಶೆಟ್ಟಿ ಕೊಲ್ಲಂಗಾನ ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ.
ದೀಪೋತ್ಸವ, ನೃತ್ಯಬಲಿ, ರಾತ್ರಿ 7.30ರಿಂದ ಶ್ರೀ ದೇವರಿಗೆ ರಂಗಪೂಜೆ, ದೀಪೋತ್ಸವ, ಶ್ರೀ ದೇವರ ನೃತ್ಯಬಲಿ, ರಾಜಾಂಗಣ ಪ್ರಸಾದದೊಂದಿಗೆ ಕಾರ್ಯಕ್ರಮಗಳು ಸಂಪನ್ನವಾಗಲಿವೆ.